ತಮಿಳುನಾಡಿನ ಒಪ್ಪಿಗೆಯಿಲ್ಲದೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳದಿರಲು ಕೇಂದ್ರದ ಭರವಸೆ: ತಮಿಳುನಾಡು ಸಚಿವ

ನವದೆಹಲಿ:ತಮಿಳುನಾಡಿನ ಒಪ್ಪಿಗೆಯಿಲ್ಲದೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಮತ್ತು ಪೆನ್ನಿಯಾರ್ ಜಲಾನಯನ ಪ್ರದೇಶದ ಮಾರ್ಕಂಡೇಯ ನದಿಯ ಮೇಲಿರುವ ಅಣೆಕಟ್ಟಿನ ಬಗ್ಗೆ ತನಿಖೆ ನಡೆಸಲು ನ್ಯಾಯಮಂಡಳಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದ್ದಾರೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ತಿಳಿಸಿದ್ದಾರೆ.
ಕೇಂದ್ರ ಸಚಿವರೊಂದಿಗಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ-ಗುಂಡಾರು ನದಿ ಜೋಡಣೆ ಯೋಜನೆಗೆ ಹಣ ಹಂಚಿಕೆಗೆ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು.

ತಮಿಳುನಾಡಿನ ಜಲಸಂಪನ್ಮೂಲಕ್ಕೆ ಸಂಬಂಧಿಸಿ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದ ಮನವಿಯನ್ನು ಕೇಂದ್ರ ಸಚಿವರಿಗೆ ಸಲ್ಲಿಸಲಾಗಿದೆ, ಸುಪ್ರೀಂಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿಗದಿಪಡಿಸಿರುವಂತೆ ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಬೇಕು, ಬಿಳಿಗುಂಡ್ಲುವಿನಲ್ಲಿ ನೀರಿನ ನೈಜತೆ ಅರಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು, ಸಿಡಬ್ಲ್ಯುಎಂಎ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಸಂಪೂರ್ಣ ಅವಧಿಯ ಅಧ್ಯಕ್ಷರನ್ನು ಶೀಘ್ರವಾಗಿ ನೇಮಕ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವುದಾಗಿ ಹೇಳಿದರು.
ತಮಿಳುನಾಡು ಸರ್ಕಾರದ ಒಪ್ಪಿಗೆ ಇಲ್ಲದೆ ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಯನ್ನು ಕೈಗೊಳ್ಳದಂತೆ ಕರ್ನಾಟಕಕ್ಕೆ ಸೂಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮಾರ್ಕಂಡೇಯ ಜಲಾಶಯಕ್ಕೆ ಸಂಬಂಧಿಸಿದಂತೆ ನ್ಯಾಯ ಮಂಡಳಿ ರಚಿಸುವಂತೆ, ಪೆನ್ನೈಯರ್ ಜಲಾನಯನ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸಗಳನ್ನು ನಿಲ್ಲಿಸುವಂತೆ ಕರ್ನಾಟಕಕ್ಕೆ ಸಲಹೆ ನೀಡುವಂತೆ ಕೇಂದ್ರವನ್ನು ಒತ್ತಾಯಿಸಲಾಗಿದೆ ಎಂದು ಸಚಿವ ದುರೈ ಮುರುಗನ್ ತಿಳಿಸಿದರು.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement