ಪೊಲೀಸರು ಬೇಕಾದ್ರೆ ಕೇಸ್‌ ಹಾಕಲಿ, ನಾವು ಸರ್ಕಾರದ ವಿರುದ್ಧ ಹೋರಾಟ ಮಾಡಿಯೇ ಮಾಡ್ತೇವೆ:ಡಿಕೆಶಿ

posted in: ರಾಜ್ಯ | 0

ಶಿರಸಿ:ರಾಜ್ಯದಲ್ಲಿ ಕೊರೊನಾ ಸಮಯದಲ್ಲಿ ಜನ ಬಹಳ ನೋವು ಅನುಭವಿಸಿದ್ದಾರೆ. ಅದರ ನಡುವೆ ರಾಜ್ಯ ಹಾಗೂ ಕೇಂದ್ರದಲ್ಲಿ ಬೆಲೆ ಏರಿಕೆಯಿಂದ ಎಲ್ಲರಿಗೂ ವಿಪರೀತ ತೊಂದರೆಯಾಗುತ್ತಿದೆ. ಇದರ ವಿರುದ್ಧ ಹೋರಾಡುವ ರಾಷ್ಟ್ರ ಹಾಗೂ ರಾಜ್ಯದ ಕಾರ್ಯಕ್ರಮಕ್ಕೂ ಮುನ್ನ ಮಾರಿಕಾಂಬ ದೇವಿಯ ಆಶೀರ್ವಾದ ಪಡೆಯಲು ಶಿರಸಿಗೆ ಆಗಮಿಸಿದ್ದೇನೆ. ಈ ದೇವಿಯ ಇತಿಹಾಸದ ಬಗ್ಗೆ ತಿಳಿದಿದ್ದೇನೆ. ನಮ್ಮ ದುಃಖವನ್ನು ದೂರಮಾಡುವ ಶಕ್ತಿ ಈ ದೇವತೆಗಿದೆ. ಹೀಗಾಗಿ ನಾಡಿನ ಜನರಿಗೆ ಎದುರಾಗಿರುವ ಆರೋಗ್ಯ ಸಮಸ್ಯೆ, ಸಂಕಟ, ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪ್ರಾರ್ಥನೆ ಮಾಡಿ ಇಲ್ಲಿಂದ ನಮ್ಮ ಹೋರಾಟ ಆರಂಭಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶಿರಸಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಇಲ್ಲಿಂದ ಅನೇಕ ಹೋರಾಟ ಆರಂಭಿಸಲಾಗಿತ್ತು. ಈ ವರ್ಷವನ್ನು ಹೋರಾಟದ ವರ್ಷ ಎಂದು ಪರಿಗಣಿಸಿದ್ದೇವೆ. ಪೊಲೀಸರು ಈ ಹೋರಾಟ ತಡೆಯುತ್ತಿದ್ದಾರೆ. ಬೇಕಾದರೆ ಕೇಸ್ ಹಾಕಿಕೊಳ್ಳಲಿ, ಇದು ಜನರ ಕಾರ್ಯಕ್ರಮ. ಜನರ ಧ್ವನಿಯಾಗಿ ಈ ಹೋರಾಟ ನಡೆಸಲಾಗುತ್ತಿದೆ ಎಂದರು.
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾದರೆ ಇತರೆ ಎಲ್ಲ ವಸ್ತುಗಳ ಬೆಲೆಯೂ ಹೆಚ್ಚತ್ತದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು, ತೆರಿಗೆ ಇಳಿಸಿ ಬೆಲೆ ಇಳಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ಈ ಹಿಂದೆ ಕಚ್ಚಾತೈಲದ ಬೆಲೆ ಆಧಾರದ  ಮೇಲೆ ಇಂಧನ ತೈಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದೇವೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಕೇಂದ್ರ ಸಚಿವ ಸಂಪುಟದಿಂದ ಹೊರ ಬಿದ್ದಿದ್ದು, ಕೋವಿಡ್ ಸಮಯದಲ್ಲಿ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬುದಕ್ಕೆ ಇದು ದೊಡ್ಡ ಸಾಕ್ಷಿಯಾಗಿದೆ. ಇದು ಅವರೊಬ್ಬರ ಜವಾಬ್ದಾರಿ ಅಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಈ ಜವಾಬ್ದಾರಿ ಹೊರಬೇಕು ಎಂದು ವಾಗದಾಳಿ ನಡೆಸಿದರು.
ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 711 ಜನ ಸತ್ತಿದ್ದಾರೆ. 51,902 ಜನ ಆಸ್ಪತ್ರೆ ಸೇರಿದ್ದಾರೆ. ಇನ್ನು ಹಲವರು ಮನೆಯಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ ಇವರ  ಮಾಹಿತಿ ಸಂಗ್ರಹಿಸಲು, ಕೋವಿಡ್ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ದೊರೆಯುವಂತೆ ಮಾಡಲು ನಮ್ಮ ಕಾರ್ಯಕರ್ತರು ಪ್ರಯತ್ನಿಸುತ್ತಾರೆ. ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸರ್ಕಾರ ಕೇವಲ 30 ಸಾವಿರ ಎಂದು ಅಂಕಿ-ಅಂಶದಲ್ಲಿ ತೋರಿಸುತ್ತಿದೆ. ಕೋವಿಡ್ ನಿಂದ ಸತ್ತ ಎಲ್ಲರಿಗೂ ಹೈಕೋರ್ಟ್ ನಿಗದಿ ಮಾಡುವ ಪರಿಹಾರ ಸಿಗುವಂತಾಗಬೇಕು ಎಂದು ತಿಳಿಸಿದರು.
ಸರ್ಕಾರದ ಎಲ್ಲ ಅಧಿಕಾರಿಗಳು ಮನೆ, ಮನೆಗೂ ಹೋಗಬೇಕು, ಕೋವಿಡ್ ಸಂದರ್ಭದಲ್ಲಿ ರೈತರು, ಕಾರ್ಮಿಕರು, ಸಂಪ್ರಾದಾಯಿಕ ವೃತ್ತಿದಾರರಿಗೆ ಆಗಿರುವ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ನಾವು ನಮ್ಮ ಕೆಲಸ ಮಾಡುತ್ತೇವೆ. ಸರ್ಕಾರ ಕೂಡ ಅಧಿಕಾರಿಗಳ ಮೂಲಕ ಈ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಭ್ರಷ್ಟಾಚಾರ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು. ಸರ್ಕಾರ ಎಲ್ಲ ವಿಚಾರಗಳನ್ನು ಮುಚ್ಚಿಡುತ್ತಿದೆ. ಮಂತ್ರಿಗಳ ಮೇಲೆ ಬರುವ ಆರೋಪಗಳನ್ನು ಮುಚ್ಚಿ, ಬಿ ರಿಪೋರ್ಟ್ ಸಿದ್ಧಪಡಿಸುತ್ತಿದೆ. ಯಡಿಯೂರಪ್ಪ ವಿರುದ್ಧ ಆರೋಪದಿಂದ ಹಿಡಿದು ಇತ್ತೀಚಿನ ರೇಪ್ ಕೇಸ್ ವರೆಗೂ ಎಲ್ಲವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ಮೊನ್ನೆಯಿಂದ ಮಂಗಳೂರಿನಿಂದ ಕರಾವಳಿಯ ಎಲ್ಲ ಭಾಗದ  ಮೀನುಗಾರರ ಸಮಸ್ಯೆ ಆಲಿಸುತ್ತಿದ್ದೇನೆ. ಒಬ್ಬ ಮೀನುಗಾರ 10 ಜನಕ್ಕೆ ಉದ್ಯೋಗ ಸೃಷ್ಟಿಸಬಲ್ಲ.  ಮೀನುಗಾರ ಎಂದರೆ ಕೇವಲ ಬಲೆ ಬೀಸುವವನಲ್ಲ. ಸಹಾಯಕ, ಮೀನು ಒಣಗಿಸುವವ, ಮಾರುವವ ಎಲ್ಲರೂ ಸೇರುತ್ತಾರೆ. ಸರಕಾರದವರು ಈ ವರ್ಗದವರನ್ನು ನಿರ್ಲಕ್ಷಿಸಿದ್ದರು. ಹೀಗಾಗಿ ಅವರ ಜತೆ ಪ್ರತ್ಯೇಕವಾಗಿ ಮಾತನಾಡಿ, ಅವರ ಸಮಸ್ಯೆ ಪಟ್ಟಿ  ಮಾಡಿ ಅದಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ಹೊನ್ನಾವರ ಕಾಸರಕೋಡಿನಲ್ಲಿಯೂ ದೇಶಪಾಂಡೆ ಹಾಗೂ ಇತರ ನಾಯಕರೆಲ್ಲರೂ ಜನರ ಪರವಾಗಿ ನಿಂತು, ಹೋರಾಟ ಮಾಡಿ ಅವರ ರಕ್ಷಣೆ ಮಾಡುತ್ತೇವೆ. ಸರ್ಕಾರ ಎಲ್ಲಿ ಬೇಕಾದರೂ ಬಂದರು ಮಾಡಿಕೊಳ್ಳಲಿ, ಅಲ್ಲಿನ ಜನರಿಗೆ ತೊಂದರೆ ನೀಡುವುದು ಬೇಡ ಎಂದರು
ಮೇಕೆದಾಟು ವಿಚಾರದಲ್ಲಿ ಕರ್ನಾಟಕ ತನ್ನ ಸ್ವಾಭಿಮಾನ ಕಳೆದುಕೊಳ್ಳಬಾರದು. ಮುಖ್ಯಮಂತ್ರಿಗಳು ತಮಿಳುನಾಡಿಗೆ ಪತ್ರ ಬರೆಯಬಾರದಿತ್ತು. ಮೇಕೆದಾಟು ಹಾಗೂ ಮಹದಾಯಿ ನಮ್ಮ ರಾಜ್ಯದಲ್ಲಿ ನಮ್ಮ ಹಕ್ಕಿನ ಯೋಜನೆ. ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದ್ದು, ಕೇಂದ್ರ ಸರ್ಕಾರವಾಗಲಿ, ತಮಿಳುನಾಡು ಸರ್ಕಾರವಾಗಲಿ ಬೇರೆಯವರಿಂದಾಗಲಿ ಅನುಮತಿ ಪಡೆಯಬೇಕಿಲ್ಲ. ಅವರ ಪಾಲು ನಾವು ಕೊಡಬೇಕು, ನಾವು ಕೊಡುತ್ತೇವೆ ಎಂದರು.
ಲಸಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಗುಜರಾತಿಗೆ ಎಷ್ಟು ಲಸಿಕೆ ಹೋಗಿದೆ, ರಾಜ್ಯಕ್ಕೆ ಎಷ್ಟು ನೀಡಲಾಗಿದೆ ಎಂಬುದನ್ನು ನೋಡಿ. ಇಲ್ಲಿ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಸುಳ್ಳು ಲೆಕ್ಕ ಹೇಳುತ್ತಿದ್ದಾರೆ. ರಾಜ್ಯಕ್ಕೆ ನಿತ್ಯ 1.50 ಲಕ್ಷ ಲಸಿಕೆ ಬೇಕು ಎಂದು ಮನವಿ ಸಲ್ಲಿಸಿದ್ದು, ಕೇಂದ್ರ ಕೇವಲ 45 ಸಾವಿರದಷ್ಟು ನೀಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತಿತರರು ಇದ್ದರು.

  ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಖಂಡಿಸಿ ಬೃಹತ್‌ ಪ್ರತಿಭಟನೆ:  ಪೆಟ್ರೋಲಿಯಂ ಉತ್ಪನ್ನಗಳ ಬೆಲೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇಂದು (ಬುಧವಾರ) ಶಿರಸಿ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಿರಸಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸೈಕಲ್ ಜಾಥಾ ನಡೆಸಿದರು.
ಸಾಂಕೇತಿಕವಾಗಿ ಸೈಕಲ್ ತುಳಿದು ಪ್ರತಿಭಟನೆಗೆ ಚಾಲನೆ ನೀಡಿದ ಡಿ ಕೆ ಶಿವಕುಮಾರವರ ಹಿಂದೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ತುಳಿದು ಮೆರವಣಿಗೆ ನಡೆಸಿದರು. ಅಲ್ಲಿ ಸಾಮಾಜಿಕ ಅಂತರವನ್ನು ಗಾಳಿಯಲ್ಲಿ ತೂರಲಾಗಿತ್ತು.
ಮುಖ್ಯ ರಸ್ತೆಗಳಲ್ಲಿ ಸೈಕಲ್ ಜಾಥಾ ನಡೆದ ನಂತರ ತೋಟಗಾರ ಕಲ್ಯಾಣ ಮಂಟಪದ ಎದುರು ಜಾಥಾ ಸಮಾಪ್ತಿಗೊಂಡಿತು.
ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಬಿ.ಕೆ.ಹರಿಪ್ರಸಾದ್, ಪ್ರಶಾಂತ ದೇಶಪಾಂಡೆ, ಸತೀಶ್ ಸೈಲ್, ಮಂಕಾಳು ವೈದ್ಯ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮೊದಲಾದವರು ಪಾಲ್ಗೊಂಡಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ