ಚಿಕ್ಕಮಗಳೂರು: ಎರಡು ದೊಡ್ಡ ಹೆಬ್ಬಾವುಗಳ ಸೆರೆ, ಒಂದು ಕುರಿ ಮರಿ ತಿಂದು ಮಲಗಿತ್ತು. ಮತ್ತೊಂದು 15 ಅಡಿ ಉದ್ದವಿತ್ತು..

ಚಿಕ್ಕಮಗಳೂರು:ಜಿಲ್ಲೆಯ ಶೃಂಗೇರಿ ತಾಲೂಕಿನ ಉಳುವೆ ಗ್ರಾಮದಲ್ಲಿ ಕುರಿ ಮರಿ ತಿಂದು ಮಲಗಿದ್ದ ಹೆಬ್ಬಾವೊಂದನ್ನ ಸೆರೆ ಹಿಡಿಯಲಾಗಿದೆ.
ಎರಡು ದಿನಗಳ ಹಿಂದೆ ರಘು ಎಂಬುವರ ಮನೆಯ ಸಮೀಪ ಕಾಣಿಸಿಕೊಂಡಿದ್ದ ಹೆಬ್ಬಾವನ್ನ ಕಾಫಿ ತೋಟದಲ್ಲಿ ಕೆಲಸ ಮಾಡುವ ಜನರು ಗಮನಿಸಿದ್ದರು. ಆದರೆ ಮತ್ತೆ ಆ ಸ್ಥಳಕ್ಕೆ ಹೋಗಿ ನೋಡುವಾಗ ಹೆಬ್ಬಾವು ಅಲ್ಲಿಂದ ಮಾಯವಾಗಿತ್ತು. ಇದಾದ ಬಳಿಕ ಕುರಿ ಮರಿಯೊಂದು ಕಾಣೆಯಾಗಿತ್ತು. ಇದನ್ನ ಹುಡುಕಿ ಹೊರಟ ರಘು ಮನೆಯವರಿಗೆ ಮತ್ತೆ ಹೆಬ್ಬಾವು ಕಾಣಿಸಿತ್ತು.
ಕುರಿ ಮರಿಯನ್ನ ತಿಂದು ಜೀರ್ಣಿಸಿಕೊಳ್ಳಲು ಜೋರಾಗಿ ಉಸಿರು ಬಿಡುತ್ತಿದ್ದಾಗ ಈ 10 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಕೂಡಲೇ ಉರಗ ತಜ್ಞ ಸ್ನೇಕ್ ಅರ್ಜುನ್ ಎಂಬುವರಿಗೆ ಕರೆ ಮಾಡಿ, ಹೆಬ್ಬಾವನ್ನ ಸೆರೆ ಹಿಡಿಯಲಾಗಿದೆ. ಹೆಬ್ಬಾವನ್ನ ಸ್ನೇಕ್ ಅರ್ಜುನ್, ಕೆರೆಕಟ್ಟೆಯ ಅರಣ್ಯದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಮತ್ತೊಂದು ಘಟನೆಯಲ್ಲಿ ಎರಡು ದಿನಗಳ ಹಿಂದೆ ಶೃಂಗೇರಿ ಪಕ್ಕದ ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಬೃಹತ್ತಾದ ಹೆಬ್ಬಾವನ್ನ ಸೆರೆ ಹಿಡಿಯಲಾಗಿದೆ. ಸುಮಾರು 80 ಕೆಜಿ ತೂಕ, 15 ಅಡಿ ಉದ್ದದ ಹೆಬ್ಬಾವು ಸ್ಥಳೀಯರಿಗೆ ಸೆರೆ ಸಿಕ್ಕಿದ್ದು ಅಚ್ಚರಿ ಮೂಡಿಸಿದೆ. ಗ್ರಾಮದ ಉಮೇಶ ಭಟ್ ಎಂಬವರ ತೋಟದಲ್ಲಿ ಹೆಬ್ಬಾವಿನ ತಲೆಯ ಮೇಲೆ ಮಹಿಳೆಯೊಬ್ಬರು ಕಾಲಿಟ್ಟಿದ್ದರು. ಆ ಬಳಿಕ ಅದು ಒದ್ದಾಟ ನಡೆಸುವುದನ್ನು ಕಂಡು ಭಯದಿಂದ ಓಡಿ ಹೋಗಿದ್ದರು. ಕೊನೆಗೆ ಸ್ಥಳಕ್ಕೆ ಬಂದ ಉರಗ ತಜ್ಞ ಹರೀಂದ್ರ ಎಂಬುವವರು ಹೆಬ್ಬಾವನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಕೊನೆಗೆ ಸೆರೆಹಿಡಿದ ಹೆಬ್ಬಾವನ್ನ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement