ಸಾವಿರಕ್ಕೂ ರೌಡಿಗಳ ಮನೆ ಮೇಲೆ ಏಕಕಾಲಕ್ಕೆ ಬೆಂಗಳೂರು ಪೊಲೀಸರ ದಾಳಿ ; ನೂರಾರು ಜನ ವಶಕ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆಗಿಳಿದ ಪೊಲೀಸರು ಶನಿವಾರ ಬೆಳ್ಳಂಬೆಳಗ್ಗೆ ಸಾವಿರಾರು ರೌಡಿಶೀಟರ್​ಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ನಗರದ 8 ವಲಯಗಳ ಪೊಲೀಸರಿಂದ ಏಕಕಾಲಕ್ಕೆ ದಾಳಿ ಮಾಡಲಾಗಿದ್ದು, ಲಾಕ್​ಡೌನ್ ತೆರವು ಬಳಿಕ ಅಪರಾಧ ಕೃತ್ಯ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದ್ದಾರೆ. ಹಣಕಾಸು ವ್ಯವಹಾರ, ವೈಯಕ್ತಿಕ ದ್ವೇಷ ಸೇರಿದಂತೆ ಇತ್ಯಾದಿ ಕಾರಣಗಳಿಂದ ದಾಖಲಾಗಿದ್ದ ಕೊಲೆ ಪ್ರಕರಣಗಳು ಹಾಗೂ ಜೈಲಿನಲ್ಲೇ ಕುಳಿತು ರೌಡಿಸಂ ನಡೆಸುತ್ತಿದ್ದ ವಿಚಾರವನ್ನು ಅತಿ ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್​ ಪಂತ್, ಹೆಚ್ಚುವರಿ ಆಯುಕ್ತರು, ಡಿಸಿಪಿಗಳೊಂದಿಗೆ ಸಭೆ ನಡೆಸಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸೂಚಿಸಿದ್ದರು. ಅದರಂತೆ ಇಂದು (ಶನಿವಾರ) ಬೆಳಗ್ಗೆ ಬೆಂಗಳೂರು ನಗರದಾದ್ಯಂತ ಸಾವಿರಕ್ಕೂ ಹೆಚ್ಚು ರೌಡಿ ಶೀಟರ್ಸ್​ ಮನೆ ಮೇಲೆ ದಾಳಿ ನಡೆಸಿ ನೂರಾರು ಜನರನ್ನು ವಶಕ್ಕೆ ಪಡೆದಿದ್ದಾರೆ.
ಕೇಂದ್ರ ವಿಭಾಗದಲ್ಲೇ 70ಕ್ಕೂ ಅಧಿಕ ರೌಡಿಗಳನ್ನು ವಶಕ್ಕೆ ಪಡೆಯಲಾಗಿದ್ದು, ದಾಳಿ ವೇಳೆ ಕೆಲವೆಡೆ ಮಾರಕಾಸ್ತ್ರಗಳು, ಲಾಂಗ್ ಪತ್ತೆಯಾಗಿವೆ. ವಶಕ್ಕೆ ಪಡೆದ ಎಲ್ಲಾ ರೌಡಿಶೀಟರ್ಸ್​ಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಮಾದಕ ವಸ್ತುಗಳ ಬಳಕೆ ಬಗ್ಗೆಯೂ ಪರೀಕ್ಷೆ ಮಾಡಲಾಗಿದೆ.
ಪಶ್ಚಿಮ ವಿಭಾಗದ 250 ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದ್ದು, ಉತ್ತರ ವಿಭಾಗದಲ್ಲಿ 292 ರೌಡಿ ಹಾಗೂ ಸಹಚರರ ಮನೆ ಮೇಲೆ ದಾಳಿ ನಡೆಸಿ 150ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಈಶಾನ್ಯ ವಿಭಾಗದಲ್ಲೂ ಹಲವು ರೌಡಿಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಡಿ.ಜೆ.ಹಳ್ಳಿ, ಬಾಗೂರ್ ಲೇಔಟ್, ಕೆ.ಜಿ ಹಳ್ಳಿ, ಇಸ್ಲಾಂಪುರಂ ಸೇರಿದಂತೆ ಬೆಂಗಳೂರು ಅನೇಕ ಕಡೆ ಪೊಲೀಸರು ದಾಳಿ ನಡೆಸಿದ್ದು, ಆಗ್ನೇಯ ವಿಭಾಗದ ಪೊಲೀಸರಿಂದ ಸುಮಾರು 200ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ಕಾಮಾಕ್ಷಿಪಾಳ್ಯ, ಬ್ಯಾಡರಹಳ್ಳಿ, ವಿವೇಕನಗರ, ವೈಯಾಲಿಕಾವಲ್ ಸೇರಿದಂತೆ ವಿವಿಧ ವಿಭಾಗದಲ್ಲಿ ದಾಳಿ ಮಾಡಿದ ಪೊಲೀಸರು ಕೆಲ ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ.
ಅನೇಕ ರೌಡಿಶೀಟರ್ಸ್​ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಕಾಗದಪತ್ರ, ಚೆಕ್ ಬುಕ್, ಮಾರಕಾಸ್ತ್ರ, ಮಾದಕವಸ್ತು ಮುಂತಾದವುಗಳಿಗಾಗಿ ಪರಿಶೀಲನೆ ನಡೆಸಿದ್ದಾರೆ.
ದಾಳಿ ವೇಳೆ ಗಾಂಜಾ, ಮಾದಕ ವಸ್ತುಗಳು ಪತ್ತೆ
ಬೆಂಗಳೂರಿನ ವೈಟ್​ಫೀಲ್ಡ್ ವಿಭಾಗದಲ್ಲಿ 102 ಕಡೆ ಪರಿಶೀಲನೆ ನಡೆಸಿ 82 ರೌಡಿಗಳನ್ನು ವಶಕ್ಕೆ ಪಡೆಯಲಾಗಿದ್ದು, ದಾಳಿ ವೇಳೆ ಗಾಂಜಾ, ಮಾದಕ ವಸ್ತುಗಳು ಪತ್ತೆಯಾಗಿದ್ದು ಅದನ್ನು ಜಪ್ತಿ ಮಾಡಲಾಗಿದೆ. ಯಲಹಂಕ ಪೊಲೀಸರ ದಾಳಿ ವೇಳೆ ಕೆಜಿ ಕೆಜಿ ಗಾಂಜಾ ಸಿಕ್ಕಿದ್ದು, ಲಾಲ ಎಂಬಾತನ ಮನೆಯಲ್ಲಿ ಐದು ಕೆಜಿ ಗಾಂಜಾ ಪತ್ತೆಯಾಗಿದೆ. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಪೂರ್ವ ವಿಭಾಗದಲ್ಲಿ 188 ರೌಡಿಗಳನ್ನು, ಈಶಾನ್ಯ ವಿಭಾಗದಲ್ಲಿ 159 ರೌಡಿಗಳನ್ನು, ಪಶ್ಚಿಮ ಪೊಲೀಸರಿಂದ 76 ರೌಡಿಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement