ತಮಿಳುನಾಡು ಸರ್ವಪಕ್ಷ ಸಭೆಯಲ್ಲಿ ಮೇಕೆದಾಟು ಯೋಜನೆಗೆ ವಿರೋಧ; ತಿರಸ್ಕರಿಸಲು ಕೇಂದ್ರಕ್ಕೆ ಒತ್ತಾಯಿಸಲು ನಿರ್ಧಾರ

ಚೆನ್ನೈ: ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರ ಇಂದು ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ಇಂದು (ಸೋಮವಾರ) ತಮಿಳುನಾಡು ಸರ್ವಪಕ್ಷಗಳ ಸಭೆಯಲ್ಲಿ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು. ಡಿಎಂಕೆ, ಎಐಎಡಿಎಂಕೆ, ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು ಸೇರಿ ಒಟ್ಟು 13 ಪಕ್ಷಗಳಿಂದ ವಿರೋಧ ವ್ಯಕ್ತವಾಗಿದ್ದು, ಕಾನೂನು ಹೋರಾಟ ನಡೆಸಲು ಸಹ ನಿರ್ಧರಿಸಲಾಗಿದೆ ಎನ್ನಲಾಗಿದೆ.
ತಮಿಳುನಾಡು ಸರ್ವಪಕ್ಷ ಸಭೆಯಲ್ಲಿ ಪ್ರಮುಖವಾಗಿ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮೇಕೇದಾಟು ಯೋಜನೆ ಜಾರಿಗೆ ಹೊರಟ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವುದು, ಸರ್ವ ಪಕ್ಷ ಸದಸ್ಯರು ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿಯಾಗಿ ಅವರ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು.
ಹಾಗೂ ಕಾನೂನು ಹೋರಾಟಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇದೇ ಜುಲೈ 7ರಂದು ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯನ್ನು ತಡೆಯುವಂತೆ ಮನವಿ ಸಲ್ಲಿಸಿದ್ದರು. ಭೇಟಿ ವೇಳೆ “ಯೋಜನೆ ಬಗೆಗಿನ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡುವರೆಗೆ ಯೋಜನೆಗೆ ಅನುಮತಿ ಕೊಡಬೇಡಿ. ತರಾತುರಿಯಲ್ಲಿ ಈ ಯೋಜನೆ ಆರಂಭವಾದರೆ ಎರಡೂ ರಾಜ್ಯಗಳ ಗಡಿಯಲ್ಲಿ ಮತ್ತೆ ಸಮಸ್ಯೆ ಉಲ್ಬಣವಾಗುತ್ತದೆ. ತಮಿಳುನಾಡಿನ ರೈತರಿಗೆ ಅನ್ಯಾಯವಾಗಲಿದೆ” ಎಂದು ದೂರು ನೀಡಿದ್ದರು.
ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಯೋಜನೆಗಾಗಿ ರೂಪಿಸಿದ್ದ ಮೇಕೆದಾಟು ಅಣೆಕಟ್ಟು ಯೋಜನೆ ವಿಷಯದಲ್ಲಿ ಕರ್ನಾಟಕ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಮತ್ತು ಪರಿಸರ ಇಲಾಖೆಗೆ ಪತ್ರ ಬರೆದು ತಾತ್ವಿಕ ಒಪ್ಪಿಗೆ ಪಡೆದಿದೆ. ರಾಷ್ಟ್ರೀಯ ಜಲ‌ ನೀತಿಯಲ್ಲೂ ಕುಡಿಯುವ ನೀರಿಗಾಗಿ ಯೋಜನೆ ರೂಪಿಸಲು ಕೆಲವು ರಿಯಾಯಿತಿಗಳಿವೆ. ಮೇಕೆದಾಟು ಅಣೆಕಟ್ಟು ಯೋಜನೆ ಮೂಲಕ ತಮಿಳುನಾಡಿಗೆ ಹೋಗುತ್ತಿದ್ದ ನೀರನ್ನು ತಡೆಯುತ್ತಿಲ್ಲ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement