ಮೇಕೆದಾಟು ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವುದಿಲ್ಲ :ಸಚಿವ ಬೊಮ್ಮಾಯಿ

ಬೆಂಗಳೂರು: ಕುಡಿಯುವ ನೀರಿನ ಉದ್ದೇಶದೊಂದಿಗೆ ರೂಪುಗೊಂಡಿರುವ ಮೇಕೆದಾಟು ಯೋಜನೆ ನಿಲ್ಲಿಸುವುದಿಲ್ಲ. ಇದು‌ ನಮ್ಮ ರಾಜ್ಯದ ಹಕ್ಕು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರೋಧಿಸಿ ಕೈಗೊಂಡ ನಿರ್ಣಯಕ್ಕೆ ಅವರು ಪ್ರತಿಕ್ರಿಯೆ ನೀಡಿದರು.
ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಸಿದ್ದವಾಗಿರುವ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಇದು ಹೆಚ್ಚುವರಿ ಕಾವೇರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡುವ ಯೋಜನೆ. ಈ ಯೋಜನೆಯನ್ನು ಜಾರಿಗೊಳಿಸುವ ಎಲ್ಲ ಹಕ್ಕುಗಳು ಕರ್ನಾಟಕಕ್ಕೆ ಇವೆ. ರಾಜ್ಯದ ಜನರ ಹಿತವನ್ನು ರಕ್ಷಿಸಲು ಯೋಜನೆಯನ್ನು ಶೇಕಡಾ 100ರಷ್ಟು ಜಾರಿಗೊಳಿಸಲಾಗುವುದು ರಾಜ್ಯ ಸರ್ಕಾರದ ಈ ಮನವಿಯನ್ನು ನಿಯಮಗಳ ಪ್ರಕಾರ ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಈಗಾಗಲೇ ತೀರ್ಪು ಬಂದಿದೆ. ಅದರ ಪ್ರಕಾರ ತಮಿಳುನಾಡಿಗೆ ಯಾವ ಸಮಯಕ್ಕೆ ಎಷ್ಟು ನೀರು ಬಿಡಬೇಕು ಎಂಬುದರ ಕುರಿತು ಕಾವೇರಿ ಮಂಡಳಿ ಗಮನಿಸುತ್ತದೆ. ಸಂಕಷ್ಟ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಳ್ಳುವುದರಿಂದ ಎರಡು ರಾಜ್ಯಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ತಮಿಳುನಾಡು ಸರ್ಕಾರ ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.
ಮೇಕೆದಾಟು ಕುಡಿಯುವ ನೀರಿನ ಯೋಜನೆ. ಇದನ್ನು ನಿಲ್ಲಿಸುವಂತೆ ಹೇಳಲು ತಮಿಳುನಾಡಿಗೆ ಯಾವುದೇ ಸಕಾರಣಗಳು ಇಲ್ಲ. ಯೋಜನೆಯನ್ನು ನಾವು ಖಂಡಿತವಾಗಿಯೂ ಜಾರಿ ಮಾಡುತ್ತೇವೆ. ಇದಕ್ಕಾಗಿ ಬೇಕಾಗುವ ಎಲ್ಲಾ ಒಪ್ಪಿಗೆ ಗಳನ್ನು ಕೇಂದ್ರದಿಂದ ಪಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ‌ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement