ಹುಬ್ಬಳ್ಳಿಯಲ್ಲಿ ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ ಕೇಂದ್ರಕ್ಕೆ ಚಾಲನೆ ನೀಡಿದ ಡಿಸಿಎಂ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಡಿಜಿಟಲ್ ಎಕನಾಮಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ ರಾಜ್ಯದ ಐಟಿ/ ಬಿಟಿ ವಲಯದಿಂದ 54 ಬಿಲಿಯನ್ ಡಾಲರ್ ದೇಶದ ಆರ್ಥಿಕತೆಗೆ ಸೇರುತ್ತಿದೆ. ಇದನ್ನು 300 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬೆಂಗಳೂರು ಟೆಕ್ ಸಮಿಟ್‌ಗಿಂತ ಪೂರ್ವಭಾವಿಯಾಗಿ ಹುಬ್ಬಳ್ಳಿಯಲ್ಲಿ ಬರುವ ಸೆಪ್ಟಂಬರ್ ಅಥವಾ ಅಕ್ಟೋಬರ್‌‌ನಲ್ಲಿ ಸಮಾವೇಶ ಆಯೋಜಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ ಸಚಿವರಾದ ಡಾ. ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.
ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ದೇಶಪಾಂಡೆ ಫೌಂಡೇಶನ್ ಸ್ಟಾರ್ಟ್ ಅಪ್ ಕೇಂದ್ರದಲ್ಲಿ ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಆರ್ಥಿಕತೆಯನ್ನು‌ 5 ಟ್ರಿಲಿಯನ್ ಏರಿಸುವ ಗುರಿ ಹೊಂದಿದ್ದಾರೆ. ಇದರಲ್ಲಿ ದೇಶದ ಐಟಿ/ ಬಿಟಿ ವಲಯದಿಂದ ದೇಶದ ಆರ್ಥಿಕತೆಗೆ 1 ಟ್ರಿಲಿಯನ್ ಕೊಡುಗೆ ಇರಲಿದೆ. ರಾಜ್ಯದ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಹಾಗೂ ಆವಿಷ್ಕಾರವನ್ನು ಬಲವಾಗಿ ಅಳವಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಸ್ವಲ್ಪ ದಿನದಲ್ಲಿಯೇ ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ ಸ್ಥಾಪಿಸಲಾಗಿದೆ. ಸಾರ್ವಜನಿಕ ಸಹಭಾಗಿತ್ವದಡಿ ಸ್ಥಾಪಿಸಿರುವ ಸಂಸ್ಥೆಯಲ್ಲಿ ಸರ್ಕಾರ ಶೇ.49 ಹಾಗೂ ಬೇರೆ ಕಂಪನಿಗಳು ಶೇ.51ರಷ್ಟು ಪಾಲು ಹೊಂದಿವೆ. ಕೆ.ಡಿ.ಇ.ಎಂ ಅಧ್ಯಕ್ಷರಾಗಿರುವ ವಿ.ವಿ.ನಾಯ್ಡು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಬಿಯಾಂಡ್ ಬೆಂಗಳೂರು ಕಲ್ಪನೆಯಡಿ, ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ ಬೆಳಗಾವಿ ಐ.ಟಿ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ಹೊರತು ಪಡಿಸಿ ರಾಜ್ಯದ ಇತರೆ ಭಾಗದಲ್ಲೂ ಐ.ಟಿ. ತಂತ್ರಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುವುದು. ಐ.ಟಿ. ಕಂಪನಿಗಳು ಮುಕ್ತವಾಗಿ ತಮ್ಮ ಯೋಜನೆಗಳನ್ನು ಸರ್ಕಾರದ ಮುಂದೆ ಇರಿಸಲು ಕೆ.ಡಿ.ಇ.ಎಂ ಸಹಾಯಕವಾಗಲಿದೆ. ಕೃಷಿ ವಾಣಿಜ್ಯ ಹಾಗೂ ಶಿಕ್ಷಣ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಪ್ರವೇಶವಾಗಿದೆ. ಇದು ಜನರ ಜೀವನವನ್ನು ಸುಸ್ಥಿರ ಅಭಿವೃದ್ಧಿ ಕಡೆಗೆ ಕೊಂಡೊಯ್ಯಲಿದೆ ಎಂಬ ಆಶಾವಾದ ವ್ಯಕ್ತ ಪಡಿಸಿದರು.
ನವ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ವೀಕ್ಷಣೆ:
ದೇಶಪಾಂಡೆ ಫೌಂಡೇಶನ್ ಸ್ಟಾರ್ಟ್ ಅಫ್ ಸ್ಯಾಂಡ್ ಬಾಕ್ಸ್ ನಲ್ಲಿರುವ ಅಗ್ರಿ ವರ್ಟಿಕಲ್, ಇನ್‌ಕ್ಯುಬೇಷನ್ ಪ್ರೋಗ್ರಾಂ. ಪಬ್ಲಿಕ್ ನೆಕ್ಸ್ಟ್, ಸ್ಕೇಲ್ ಅಪ್ ಪ್ರೋಗ್ರಾಂ. ಯುವ, ಎಡ್ಜ್, ಐಡಿಯಾ ಟು ಪ್ರೋಟೋಟೈಪ್ ಸೇರಿದಂತೆ ಇನ್ನಿತರ ಹಲವಾರು ಸ್ಟಾರ್ಟ್ ಅಪ್ ಗಳ ವೀಕ್ಷಣೆ ಮಾಡಿದ ಸಚಿವರು ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ಟಾರ್ಟ್ ಅನ್ವೇಷಣೆ ಮಾಡಿದ ಯುವಕರೊಂದಿಗೆ ಸಂವಾದ ನಡೆಸಿ ತಂಡಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಅಶೋಕ್ ಶೆಟ್ಟರ್, ದೇಶಪಾಂಡೆ ಫೌಂಡೇಶನ್ ಸಿಇಓ ವಿವೇಕ್ ಪವಾರ್, ಸೇರಿದಂತೆ, ವೆಬಿನಾರ್ ಮೂಲಕ ಇತರರು ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement