ತುಂಬಿ ಹರಿಯುವ ಹೊಳೆಯಲ್ಲಿ ಸ್ಟ್ರೆಚ್ಚರ್ ನಲ್ಲಿ ಗಾಯಾಳು ಮಹಿಳೆ ಹೊತ್ತೊಯ್ದರು..!

ಮಂಗಳೂರು: ರಾಜ್ಯ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ಕ್ಷೇತ್ರದಲ್ಲಿ ತುಂಬಿ ಹರಿಯುವ ನದಿಯಲ್ಲಿ ಗಾಯಾಳು ವೃದ್ಧೆಯನ್ನು ಸ್ಟ್ರೆಚರಿನಲ್ಲಿ ಎತ್ತಿಕೊಂಡು ಹೋಗಬೇಕಾದ ಅನಿವಾರ್ಯತೆಯ ವಿದ್ಯಮಾನ ಬುಧವಾರ ನಡೆದಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನ ಮರಸಂಕ ಎಂಬಲ್ಲಿ ನಡೆದಿದೆ. ಅಲ್ಲಿನ ನಿವಾಸಿ ದೇವಕಿ ಅವರು ಮನೆಯಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಕಾಲು ಮುರಿತಕ್ಕೊಳಗಾಗಿದ್ದರು. ಆದರೆ ಚಿಕಿತ್ಸೆಗಾಗಿ ನಗರಕ್ಕೆ ಹೋಗಬೇಕಾದರೆ ಮರಸಂಕದಲ್ಲಿರುವ ಕಿರುನದಿಯನ್ನು ದಾಟಿ ಹೋಗಬೇಕು. ಆದರೆ ಈ ನದಿಗೆ ಸೇತುವೆ ಇಲ್ಲ.ಮಳೆಗಾಲವಾದ್ದರಿಂದ ನದಿ ತುಂಬಿ ಹರಿಯುತ್ತದೆ. ಹೀಗಾಗಿ ಅನಿವಾರ್ಯವಾಗಿ ತುಂಬಿ ಹರಿಯುವ ಹೊಳೆಯಲ್ಲಿಯೇ ವೃದ್ಧೆ ದೇವಕಿ ಅವರನ್ನು ಸ್ಥಳೀಯರು ಸ್ಟ್ರೆಚರಿನಲ್ಲಿ ಹೊತ್ತುಕೊಂಡು ಹೋಗಬೇಕಾಯಿತು. ಹೊಳೆ ದಾಟಿದ ನಂತರ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರು.
ಜಾಲ್ಸೂರಿನ ಮರಸಂಕದಲ್ಲಿ 9 ಮನೆಗಳಿದ್ದು ಸುಮಾರು 50 ಜನ ವಾಸಿಸುತ್ತಿದ್ದಾರೆ. ಸುಮಾರು ಅರ್ಧ ಕಿಲೋಮೀಟರ್ ಹೊಳೆ ದಾಟಿ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇಲ್ಲಿದೆ. ಪಯಸ್ವಿನಿ ನದಿಗೆ ಸೇರುವ ಈ ಹೊಳೆಯಲ್ಲಿ ಬಾರಿ ಮಳೆ ಬರುತ್ತಿರುವಾಗ ನೀರು ಅಪಾಯದ ಮಟ್ಟ ತಲುಪುತ್ತದೆ. ಈ ಊರಿನ ಜನ 15 ವರ್ಷದಿಂದ ಸೇತುವೆಗಾಗಿ ಮನವಿ ಮಾಡುತ್ತ ಬಂದಿದ್ದರೂ ಸೇತುವೆ ಕನಸಾಗಿಯೇ ಉಳಿದಿದೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement