ಹೋಟೆಲಿನಲ್ಲಿ ಹಲ್ಲೆ ಮಾಡಿಲ್ಲ ಎಂದಾದ್ರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿ :ನಟ ದರ್ಶನಗೆ ಇಂದ್ರಜೀತ್‌ ಲಂಕೇಶ ಪ್ರತಿಸವಾಲು

ಬೆಂಗಳೂರು: ಮೈಸೂರಿನ ಸಂದೇಶ್​ ದಿ ಪ್ರಿನ್ಸ್​​ ಹೋಟೆಲ್​ ವೇಟರ್​ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸಂಬಂಧ ನಟ ದರ್ಶನ್​ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಡುವೆ ವಾಕ್ಸಮರ ಶನಿವಾರ ತಾರಕಕ್ಕೇರಿದೆ.
ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿದ ನಟ ದರ್ಶನ್​​ ಅವರು, ಗಂಡಸ್ತನ ಇದ್ದರೆ ನಾನು ಹಲ್ಲೆ ಮಾಡಿರುವ ವಿಡಿಯೋವನ್ನು ಇಂದ್ರಜಿತ್​ ರಿಲೀಸ್​ ಮಾಡಲಿ ಎಂದು ಸವಾಲು ಹಾಕಿದ ಬೆನ್ನಲ್ಲೇ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಇಂದ್ರಜೀತ್ ಲಂಕೇಶ​ ನಟ ದರ್ಶನ್‌ ಅವರಿಗೆ ತಿರುಗೇಟು ನೀಡಿದ್ದಾರೆ.ಗಂಡಸ್ತನ ಪ್ರೂವ್​ ಮಾಡಿಕೊಳ್ಳುವ ಅಗತ್ಯ ನನಗಿಲ್ಲ. ನಾನು ಗೂಂಡಾಗಿರಿ ಎಂದಿದ್ದನ್ನು ದರ್ಶನ್​ ಬೇರೆ ರೀತಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಹೇಳಿದನ್ನು ಸರಿಯಾಗಿ ಓದಿಕೊಂಡಿಲ್ಲ ಎಂದು ಹೇಳಿದ್ದಾರೆ.
ನೀವು ಸಪ್ಲೈಯರಗೆ ಹೊಡೆದಿದ್ದೀರೋ ಇಲ್ಲವೋ? ಬಡ ಹುಡುಗನಿಗೆ ಹೊಡೆದಿದ್ದು ಎಷ್ಟು ಸಮಂಜಸ.? ಅದಕ್ಕೆ ಕ್ಷಮೆ ಕೇಳಲು ಹೇಳಿದ್ದೆ. ಅರುಣಾ ದೇವಿಯನ್ನ ನಿಮ್ಮ ತೋಟಕ್ಕೆ ಕರೆಸಿಕೊಂಡಿದ್ದೀರೋ ಇಲ್ಲವೋ ಎಂದು ಮೊದಲು ಹೇಳಿ. ಇಲ್ಲ ಎಂದು ಹೇಳುವುದಾದರೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿ ನೋಡೋಣ ಎಂದು ಪ್ರತಿ ಸವಾಲು ಹಾಕಿದ್ದಾರೆ. ನಿಮ್ಮ ಪತ್ನಿ ವಿಚಾರದಲ್ಲಿ ಲಾಯರ್ ಯಾಕೆ ಕರೆಸಿಕೊಂಡಿದ್ದಿರಿ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಿದೆ. ಇದು ರೀಲ್ ಸ್ಟೋರಿ ಅಲ್ಲ, ರಿಯಲ್ ಸ್ಟೋರಿ ಎಂದು ಟಾಂಗ್‌ ನೀಡಿದ್ದಾರೆ.
ಅಂದು ಹೋಟೆಲ್​ನಲ್ಲಿ ಹಲ್ಲೆ ಮಾಡಿಲ್ಲ ಎಂದಾದರೆ, ಅರುಣಾಕುಮಾರಿಯನ್ನು ನಿಮ್ಮ ತೋಟಕ್ಕೆ ಕರೆಸಿಕೊಂಡಿಲ್ಲ ಎಂದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ಎಂದು ದರ್ಶನ್​​ಗೆ ಇಂದ್ರಜಿತ್​ ಪಂಥಾಹ್ವಾನ ನೀಡಿದ್ದಾರೆ.
ನಟ ದರ್ಶನ್ ಅವರು ವಿಚಲಿತರಾಗಿದ್ದಾರೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ನಟ ದರ್ಶನ್‌ ನಾನು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರೆ  ಸಾಕು. ನಾನು ಸೆಲೆಬ್ರಿಟಿಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದ್ದೇನೆ. ಆದರೆ  ಅನ್‌ಎಜುಕೇಟೆಡ್‌ ಅಂತ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿರಿಯ ವಕೀಲರನ್ನ ಕರೆಯಿಸಿ ನಾನು ಸಾಕ್ಷಿಗಳನ್ನ ಯಾರಿಗೆ ಕೊಡಬೇಕು ಎನ್ನುವ ಬಗ್ಗೆ ಚರ್ಚೆ ಮಾಡಿದ್ದೇನೆ. ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇನೆ, ಇದು ಗಂಭೀರ ವಿಚಾರ. ತಲೆ ಕೊಚ್ತೀನಿ, ಸೀಳ್ತಿನಿ ಎಂಬ ಪದಗಳನ್ನು ಸೆಲೆಬ್ರಿಟಿಗಳು ಬಳಸಬಾರದು ಎಂದು ಹೇಳಿದ್ದೆ. ಇವತ್ತು ನೀವು ಬಳಸಿರುವ ಪದ ನಿಮ್ಮ ಸಂಸ್ಕಾರ, ಆಚಾರ -ವಿಚಾರವನ್ನು ತೋರಿಸುತ್ತದೆ. ನಟನನ್ನು ವ್ಯಕ್ತಿತ್ವ ನೋಡಿ ಮೆಚ್ಚುತ್ತಾರೆ. ಅದನ್ನು ದರ್ಶನ್​​ ಮೊದಲು ಅರಿಯಬೇಕು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement