ಶರಣ ಸಾಹಿತಿ-ಚಿಂತಕ ಪ್ರೊ. ಜಿ. ಬಿ.ವೀರಭದ್ರಯ್ಯನವರ

(ಪ್ರೊ. ಜಿ. ಬಿ. ವೀರಭದ್ರಯ್ಯನವರ ಪ್ರಥಮ ಸ್ಮರಣೆ ಮತ್ತು ಸಂಸ್ಮರಣಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ದಿ. ೨೨.೦೭.೨೦೨೧ ರಂದು ಮುಂಜಾನೆ ೧೦.೩೦ ಗಂಟೆಗೆ ನಡೆಯಲಿದೆ., ಆ ನಿಮಿತ್ತ ಲೇಖನ)

ಹುಬ್ಬಳ್ಳಿ ತಾಲ್ಲೂಕಿನ ಹಳ್ಯಾಳ ಗ್ರಾಮದ ಪ್ರೊ. ಗುರುಶಾಂತಯ್ಯ ಬಸಯ್ಯ ವೀರಭದ್ರಯ್ಯನವರ ಅವರು ವಿದ್ಯಾರ್ಥಿಗಳಿಗೆಲ್ಲ ಶರಣ ಸಾಹಿತಿ ಪ್ರೊ. ವೀರಭದ್ರಯ್ಯನವರ ಎಂದೇ ಚಿರಪರಿಚಿತರು. ಇವರು ಹಳ್ಯಾಳ, ಹುಬ್ಬಳ್ಳಿ, ಶಿಗ್ಗಾಂವ ತಾಲ್ಲೂಕಿನ ಮಡ್ಡಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಪ್ರೌಢ ಶಿಕ್ಷಣವನ್ನು ಹುಬ್ಬಳ್ಳಿಯ ಸಿಟಿ ಹೈಸ್ಕೂಲಿನಿಂದ, ಬಿ.ಎಸ್.ಸಿ. ಪದವಿಯನ್ನು ಕೆಎಲ್‌ಇ ಸಂಸ್ಥೆಯ ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯದಿಂದ, ಬಿ.ಟಿ. ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ, ಬಿ.ಎಡ್. ಪದವಿಯನ್ನು ಮೈಸೂರಿನಿಂದ, ಕಾನೂನು ಶಿಕ್ಷಣವನ್ನು ಧಾರವಾಡದ ಕೆ.ಪಿ.ಇ.ಎಸ್. ಕಾನೂನು ಮಹಾವಿದ್ಯಾಲಯ ಮತ್ತು ಹುಬ್ಬಳ್ಳಿಯ ಜೆ.ಕೆ. ಕಾನೂನು ಮಹಾವಿದ್ಯಾಲಯದಿಂದ ಪಡೆದಿದ್ದರು.
ಕೇಂದ್ರ ಸರಕಾರದ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಟೆಲಿಪೋನ್ ಆಪರೇಟರ್ ಸೇವೆ ಆರಂಭಿಸಿದ ಇವರು ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಕಾರ್‍ಯನಿರ್ವಹಿಸಿದ್ದರು. ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ೧೯೭೪ ರಿಂದ ಕನ್ನಡ ಉಪನ್ಯಾಸಕರಾಗಿ ಚಿಕ್ಕಮಗಳೂರು ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ, ೩೧-೦೫-೨೦೦೨ ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಯಾಗಿ, ಧಾರವಾಡ ಜಿಲ್ಲಾ ಸಂಪೂರ್ಣ ಸಾಕ್ಷರತಾ ಆಂದೋಲನಾ ಜಿಲ್ಲಾ ಸಂಯೋಜಕರಾಗಿ, ಪ್ರಾಚಾರ್ಯರಾಗಿ, ೧೯೯೭ರಲ್ಲಿ ಧಾರವಾಡದಲ್ಲಿ ನೂತನವಾಗಿ ಆರಂಭವಾದ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್‍ಯ ನಿರ್ವಹಿಸಿ, ಅಲ್ಲಿ ಹಲವಾರು ರಚನಾತ್ಮಕ ಕಾರ್‍ಯಗಳನ್ನು ಮಾಡಿದ್ದರು.
ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಕಾರ್‍ಯಕಾರಿ ಮಂಡಳಿಯ ಸದಸ್ಯರಾಗಿ, ಕರ್ನಾಟಕ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಶಿಕ್ಷಕರ ಮತ್ತು ಯುವ ಮೇಳಗಳ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿ ಇವರು ಗೋಕಾಕ ಚಳವಳಿಯಲ್ಲಿ ಸಕ್ರೀಯ ಭಾಗವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಹುಬ್ಬಳ್ಳಿ ಜಾಗೃತ ಭಾವೈಕ್ಯತಾ ಒಕ್ಕೂಟಕ ಸಂಸ್ಥಾಪಕರಾಗಿ ಮತ್ತು ಗೌರವಾಧ್ಯಕ್ಷರಾಗಿ ಸಾಹಿತ್ತಿಕ ಮತ್ತು ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಆಯೋಜಿಸಿದ್ದರು
ವೃತ್ತಿಯಿಂದ ಪ್ರಾಧ್ಯಾಪಕರಾಗಿ, ಪ್ರವೃತ್ತಿಯಿಂದ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. ವಚನ ಮತ್ತು ಜಾನಪದ ಸಾಹಿತ್ಯ ಮತ್ತು ಸಂಗೀತ ಕುರಿತು ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ರೂ. ೫೦,೦೦೦ ರೂ.ಗಳ ದತ್ತಿ ನೀಡಿ, ೨೦೦೨ ದಿಂದಲೂ ಧಾರವಾಡ ಜಿಲ್ಲಾ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ವಚನ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ನಗದು ಪುರಸ್ಕಾರ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದರು.
ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರಕ್ಕಾಗಿ ಆದರ್ಶ ಪ್ರಕಾಶನವನ್ನು ಸ್ಥಾಪಿಸಿ ಆ ಮೂಲಕ ವಚನಾಮೃತ, ಶರಣರ ಜನಪ್ರಿಯ ವಚನಗಳು, ಅನುಭಾವ ಪದಗಳು, ವಚನ ಜ್ಯೋತಿ ಸಂಪುಟ ೧ ಮತ್ತು ೨, ಷಟ್‌ಸ್ಥಲ ಚಕ್ರವರ್ತಿ ಶ್ರೀ ಚನ್ನಬಸವೇಶ್ವರ ವಚನ ವೈಭವ ಗಂಗಾಬಿಕೆ ಮುಂತಾದ ೧೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಇತ್ತಿಚಿಗೆ ಶ್ರೀ ರುದ್ರಾಕ್ಷಿ ಮಠದಿಂದ ‘ಕೈವಲ್ಯ ಪದ್ದತಿ ಪರಿಚಯ’ ಕೃತಿ ಬಿಡುಗಡೆಯಾಗಿದೆ. ಶರಣ ಸಾಹಿತ್ಯ ಕುರಿತು ಅವರ ಲೇಖನಗಳು ನಾಡಿನ ದಿನಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವಾರು ಸಂಘ-ಸಂಸ್ಥೆಗಳು, ಮಠಾಧೀಶರು ಅವರ ಸೇವೆಯನ್ನು ಗುರುತಿಸಿ, ಸನ್ಮಾನಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕುರಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ವಚನಾಮೃತ ಸಂಘದಿಂದ ವಚನಾಮೃತ ಮತ್ತು ಗದಗ ತಾಲ್ಲೂಕಿನ ಎಲಿಶಿರೂರು ಗ್ರಾಮದ ಶ್ರೀ ಕೊಟ್ಟೂರು ಬಸವೇಶ್ವರ ಭಜನಾ ಮಂಡಳಿಯಿಂದ ಭಜನೆಯಲ್ಲಿ ವಚನಾಮೃತ ಧ್ವನಿ ಸುರಳಿ ಮತ್ತು ಆಡಿಯೋ ಸಿಡಿಗಳನ್ನು ನಿರ್ಮಿಸಿ, ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. .
೧೯೯೯ರಲ್ಲಿ ಕ್ಯಾನ್ಸರ್ ರೋಗ ಬಂದರೂ ವೀರಭದ್ರಯ್ಯನವರ ಧೃತಿಗೆಡದೆ ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಾ ಬಂದವರು. ಸ್ವಾತಂತ್ರ್ಯ, ಸ್ವಾಭಿಮಾನ, ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ, ಒಳ್ಳೆಯ ಆಚಾರ ವಿಚಾರ, ಉತ್ತಮ ನಡೆ-ನುಡಿ, ಸತ್ಯ ಶುದ್ಧ ಕಾಯಕ, ದಾಸೋಹ ಮುಂತಾದ ಶರಣದ ವಚನಗಳನ್ನು ಸಂಗ್ರಹಿಸಿ, ಪ್ರಕಟಿಸುತ್ತಾ, ಉಚಿತವಾಗಿ ಹಂಚುತ್ತಾ, ತಮ್ಮ ಆದಾಯದ ಹಣವನ್ನು ಸಾಹಿತ್ಯ ಪ್ರಸಾರಕ್ಕೆ ವಿನಿಯೋಗಿಸುತ್ತಿದ್ದರು.
ಜಿ.ಬಿ. ವೀರಭದ್ರಯ್ಯನರ ಕಾರ್‍ಯಚಟುವಟಿಕೆಗಳಿಗೆ ಗದುಗಿನ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು, ಮೂರುಸಾವಿರಮಠದ ಶ್ರಿ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಶರಣ ಸಾಹಿತಿಗಳಾದ ಗೋ.ರು. ಚನ್ನಬಸಪ್ಪ, ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ ಮುಂತಾದವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.
ವಿದ್ಯಾರ್ಥಿಗಳು ವಚನಗಳನ್ನು ಕಂಠಪಾಠ ಮಾಡುವುದರಿಂದ ಅವರ ನೆನಪಿನ ಶಕ್ತಿ ಹೆಚ್ಚುತ್ತದೆ. ಸಾಹಿತ್ಯ ಮತ್ತು ಸಂಸ್ಕೃತಿ ಬಗೆಗೆ ಪ್ರೀತಿ ಹೆಚ್ಚುತ್ತದೆ, ಎನ್ನುತ್ತಿದ್ದರು ವೀರಭದ್ರಯ್ಯ ಅವರು. ವೀರಭದ್ರಯ್ಯನವರು ಪಂ.ಮಲ್ಲಿಕಾರ್ಜುನ ಮನಸೂರ, ಪಂ. ಬಸವರಾಜ ರಾಜಗುರು,ಪಂ. ಸಿದ್ದರಾಮ ಜಂಬಲದಿನ್ನಿ ಮತ್ತು ಬಾಳಪ್ಪ ಹುಕ್ಕೇರಿ ಅವರು ಹಾಡುಗಳು ಮತ್ತು ವಚನಗಳು ತಮ್ಮ ಜೀವನದ ಮೇಲೆ ಪ್ರಭಾವ ಬೀರಿವೆ ಎಂದು ಹೇಳುತ್ತಿದ್ದರು.
೭೫ ವರ್ಷ ಬದುಕಿದ (ಜನನ: ೦೫-೦೫-೧೯೪೬, ನಿಧನ : ೨೨-೦೭-೨೦೨೦) ಇವರು ಶರಣರ ಕಾಯಕ ಮತ್ತು ದಾಸೋಹ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು.
-ಬಿ.ಎಸ್.ಮಾಳವಾಡ ನಿವೃತ್ತ ಗ್ರಂಥಪಾಲಕರು

 

 

 

 

 

 

 

 

 

 

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement