ಬಿಎಸ್‌ವೈಗೆ ಬದಲಿ ನಾಯಕ: ಬಿಜೆಪಿ ವರಿಷ್ಠರಿಗೆ ಆಯ್ಕೆಯೇ ಸವಾಲು

ಬೆಂಗಳೂರು: ಹೈಕಮಾಂಡ್ ಸೂಚಿಸಿದರೆ `ರಾಜೀನಾಮೆ ನೀಡಲು ಸಿದ್ಧ. ಜುಲೈ 25ರಂದು ಬಿಜೆಪಿ ವರಿಷ್ಠರಿಂದ ಸೂಚನೆ ಬರಬಹುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ ಬೆನ್ನಲ್ಲೇ ಸಮರ್ಥ ಹಾಗೂ ಮುಂದಿನ ಚುನಾವಣೆಯಲ್ಲಿ ಮತತಂದು ಕೊಡುವ ನಾಯಕನ ಹುಡುಕಾಟ ಬಿಜೆಪಿ ವರಿಷ್ಠರಿಗೆ ಈಗ ಸವಾಲಾಗಿದೆ.
ಮುಖ್ಯಮಂತ್ರಿ ಹುದ್ದೆಗೆ ಹಲವರ ಹೆಸರು ಚಾಲ್ತಿಗೆ ಬಂದಿದ್ದು, ಯಾರನ್ನೂ ಆಯ್ಕೆ ಮಾಡುವುದು ಎಂಬ ಧರ್ಮಸಂಕಟಕ್ಕೆ ಸಿಲುಕಿದೆ.
ಸಂಘ ಪರಿವಾರದ ಪ್ರಮುಖರೊಬ್ಬರನ್ನು ಅವರನ್ನು ಬಿಜೆಪಿ ವರಿಷ್ಠರು ನೂತನ ನಾಯಕನ ಆಯ್ಕೆ ಸಂಬಂಧ ಚರ್ಚಿಸಲು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ನಾಳೆ ಬಿಜೆಪಿ ವರಿಷ್ಠ ನಾಯಕರ ಜತೆ ಹೊಸ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ನೂತನ ಮುಖ್ಯಮಂತ್ರಿ ಹುದ್ದೆಗೆ ವರಿಷ್ಠರು ಸೂಚಿಸಿದ ಕೆಲವು ಹೆಸರುಗಳಿಗೆ ಸಂಘ ಪರಿವಾರದ ಪ್ರಮುಖರು ಯಾವ ಸಂದೇಶ ನೀಡುತ್ತಾರೆ ಎಂಬುದು ಮುಖ್ಯವಾಗುತ್ತದೆ.
ಮುಖ್ಯಮಂತ್ರಿ ಹುದ್ದೆಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶಾಸಕ ಅರವಿಂದ್ ಬೆಲ್ಲದ ಹೆಸರುಗಳು ಚಾಲ್ತಿಗೆ ಬಂದಿದೆ.
ರಾಜ್ಯದ ಪ್ರಬಲ ಸಮುದಾಯವಾಗಿ ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಆಗಿರುವ ವೀರಶೈವ ಲಿಂಗಾಯತ ಸಮುದಾಯವರನ್ನೇ ಮುಖ್ಯಮಂತ್ರಿ ಹುದ್ದೆಗೆ ಕೂರಿಸಬೇಕೆಂಬ ಕೂಗು ಬಲವಾಗಿದೆ. ಹೀಗಾಗಿ, ಶಾಸಕ ಅರವಿಂದ ಬೆಲ್ಲದ,ಸಚಿವ ಮುರುಗೇಶ್ ನಿರಾಣಿ, ಹೆಸರು ಮುಂಚೂಣಿಯಲ್ಲಿದೆ.
ಮುಖ್ಯಮಂತ್ರಿ ಹುದ್ದೆಗೆ ತೆರೆ ಮರೆಯಲ್ಲಿ ಮುಖಂಡರು ಕಸರತ್ತು ನಡೆಸಿದ್ದರೂ, ಅಂತಿಮವಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಗೆದುಕೊಳ್ಳುವ ನಿರ್ಧಾರವೇ ನಿರ್ಣಾಯಕವಾಗಲಿದೆ. ಜೊತೆಗೆ ಸಂಘ ಪರಿವಾರದ ಸೂಚನೆಯೂ ಕೂಡ ಮುಖ್ಯವಾಗಲಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement