ಪ್ರವಾಹಕ್ಕೆ ತತ್ತರಿಸಿದ ಉತ್ತರ ಕನ್ನಡ: 108 ಗ್ರಾಮಗಳಿಗೆ ಹಾನಿ, ನಾಲ್ವರು ಸಾವು

ಕಾರವಾರ: ಧಾರಾಕಾರವಾಗಿ ಸುರಿದ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ನದಿಗಳು ಉಕ್ಕಿ ಹರಿದ ಪರಿಣಾಮ ಈ ಬಾರಿ ದೊಡ್ಡ ಮಟ್ಟದಲ್ಲಿಯೇ ಹಾನಿ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯ ಒಟ್ಟು 108 ಗ್ರಾಮಗಳಿಗೆ ನೆರೆಯಿಂದ ಹಾನಿಯಾಗಿದ್ದು, ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮೂರು ದಿನಗಳಿಂದ ಜಿಲ್ಲೆಯ ಘಟ್ಟದ ಮೇಲೆ ಹಾಗೂ ಕರಾವಳಿ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಿದೆ. ಅದರಲ್ಲೂ ಕಾಳಿ, ಗಂಗಾವಳಿ, ಅಘನಾಶಿನಿ ನದಿ ರೌದ್ರಾವತಾರ ತಾಳಿದ್ದರಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಅಂಕೋಲಾ, ಯಲ್ಲಾಪುರ, ಕಾರವಾರ, ಶಿರಸಿ, ಸಿದ್ದಾಪುರ ಹಾಗೂ ಕುಮಟಾ ತಾಲೂಕುಗಳು ನಲುಗಿವೆ.
ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಒಟ್ಟು 59 ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 281 ಮನೆಗಳು ಭಾಗಶಃ ಹಾನಿಯಾಗಿದೆ ಎಂದು ಹೇಳಲಾಗಿದೆ. 15287 ಜನರು ಪ್ರವಾಹದಿಂದ ಬಾಧಿತವಾಗಿದ್ದು ಅದರಲ್ಲಿ 15249 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಸದ್ಯ 132 ಕಾಳಜಿ ಕೇಂದ್ರದಲ್ಲಿ 15077 ಜನರು ತಂಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರವಾಹಕ್ಕೆ ಸಿಲುಕಿ 43 ಜಾನವಾರುಗಳು ಮೃತಪಟ್ಟಿದ್ದು 912.88 ಹೆಕ್ಟೇರ್ ಕೃಷಿ ಭೂಮಿ ಹಾಗೂ 61 ಹೆಕ್ಟೇರ್ ತೋಟಗಾರಿಕಾ ಭೂಮಿಗೆ ಹಾನಿ ಸಂಭವಿಸಿದೆ.
ಜಿಲ್ಲೆಯಲ್ಲಿ ಒಟ್ಟು 156.8 ಕಿಲೋ ಮೀಟರ್ ರಸ್ತೆ, 32 ಸೇತುವೆ ಹಾಗೂ ಕಾಲುಸಂಕಗಳು ನೆರೆಯಿಂದ ಹಾನಿಗೊಳಗಾಗಿವೆ. 8 ಶಾಲೆ, 1 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಹಾನಿಯಾಗಿದೆ.
ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿಯಲ್ಲಿ ನೀರಿನ ಪ್ರಮಾಣ ಹಾಗೂ ಕಾರವಾರ ತಾಲೂಕಿನಲ್ಲಿ ಕದ್ರಾ ಜಲಾಶಯದಿಂದ ನೀರು ಬಿಡುವ ಪ್ರಮಾಣ ಕಡಿಮೆ ಮಾಡಿದ್ದು, ನೀರು ಇಳಿದ ಬಳಿಕ ಸಂಪೂರ್ಣ ಹಾನಿಯ ಮಾಹಿತಿ ದೊರೆಯಲಿದೆ.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement