ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಪ್ರವಾಹ: ಭಾಗಶಃ ಮುಳುಗಿದ ಗೋಕಾಕ

posted in: ರಾಜ್ಯ | 0

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯತ್ತಿರುವ ಮಳೆಗೆ ಹಲವು ನದಿಗಳು ಉಕ್ಕೇರಿದ್ದು, ನದಿಗಳ ಪ್ರವಾಹದಿಂದಾಗಿ ಜಿಲ್ಲೆಯ ಗೋಕಾಕ್ ನಗರ ಭಾಗಶಃ ಮುಳುಗಡೆಯಾಗಿದೆ.

ಪಶ್ಚಿಮಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರ್ಭಟದಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಘಟಪ್ರಭಾ, ಮಾರ್ಕಂಡೇಯ, ಹಿರೇಣ್ಯಕೇಶಿ ಹಾಗೂ ಬಳ್ಳಾರಿ ನಾಲಾ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಎಲ್ಲಾ ನದಿಗಳ ನೀರು ಸೇರಿ ೧.೨೦ ಲಕ್ಷ ಕ್ಯೂಸೆಕ್ ನೀರಿನ ಪರಿಣಾಮವಾಗಿ ಗೋಕಾಕ್ ನಗರ ಭಾಗಶಃ ಮುಳುಗಿದೆ. ನಗರದಲ್ಲಿ ಅನೇಕ ಬಡಾವಣೆಗಳಿಗೆ ನೀರು ನುಗ್ಗಿದ್ದು, ಜನ ಸಂಬಂಧಿಕರ ಮನೆಗಳು ಹಾಗೂ ಕಾಳಜಿ ಕೇಂದ್ರ ಸೇರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಗೋಕಾಕ್ ನಗರವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳು ಜಲಾವೃತವಾಗಿವೆ. ಗೋಕಾಕ್- ಕೊಣ್ಣೂರು, ಗೋಕಾಕ್ – ಘಟಪ್ರಭಾ, ಗೋಕಾಕ್- ಯರಗಟ್ಟಿ ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಗೋಕಾಕ್ ನಗರ ಅಷ್ಟೇ ಅಲ್ಲದೇ ತಾಲೂಕಿನ ೮ಕ್ಕೂ ಹೆಚ್ಚು ಗ್ರಾಮಗಳಿಗೆ ಸದ್ಯ ಜಲದಿಗ್ಭಂಧನ ಉಂಟಾಗಿದೆ. ಜನ ಗ್ರಾಮಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ಘಟಪ್ರಭಾ ಜಲಾಶಯದಿಂದ ನೀರು ಹಾಗೂ ಮಾರ್ಕಂಡೇಯ, ಹಿರಣ್ಯಕೇಶಿ ನದಿ ಹಾಗೂ ಬಳ್ಳಾರಿ ನಾಲಾ ನೀರು ಸೇರಿಕೊಂಡು ಗೋಕಾಕ್ ಬಳಿಯಿಂದ ಹರಿದು ಹೋಗುತ್ತಿದೆ. ಇದರಿಂದ ಕೊಣ್ಣೂರು ಪಟ್ಟಣದ ಅನೇಕ ಬಡಾವಣೆಗಳು ಜಲಾವೃತಗೊಂಡಿವೆ. ಗೋಕಾಕ್ ನಗರದ ಮಟನ್ ಮಾರ್ಕೆಟ್, ಭೋಜಗಾರ್ ಗಲ್ಲಿ, ಉಪ್ಪಾರ ಗಲ್ಲಿ, ಗುರವಾರ್ ಪೇಟೆ ಸೇರಿ ಅನೇಕ ಬಡಾವಣೆಗಳ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮನೆಯ ವಸ್ತುಗಳನ್ನು ಬಿಟ್ಟು ಜನ ಪ್ರಾಣ ಭಯದಿಂದ ಓಡಿಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

ಗೋಕಾಕ್- ಕೊಣ್ಣೂರು, ಗೋಕಾಕ್ – ಘಟಪ್ರಭಾ, ಗೋಕಾಕ್- ಯರಗಟ್ಟಿ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಗೋಕಾಕ್ ನಗರದ ನಿಮ್ರಾ ಆಸ್ಪತ್ರೆ ಸಹ ಜಲಾವೃತವಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳನ್ನು ಬಿಡುಗಡೆ ಮಾಡಲಾಯಿತು. ನೀರಿನಲ್ಲಿ ರೋಗಿಗಳು ನಡೆದುಕೊಂಡು ಹೋಗಿದ್ದು, ಜತೆಗೆ ಬಂದ ಪೋಷಕರಿಗೆ ಸಹ ಆತಂಕ ಎದುರಾಗಿತ್ತು.

ಗೋಕಾಕ್ ತಾಲೂಕಿನ ೮ಕ್ಕೂ ಹೆಚ್ಚು ಗ್ರಾಮಗಳು ಘಟಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿವೆ. ಅಡಿಬಟ್ಟಿ, ಮೆಳವಂಕಿ, ಹಡಗಿನಾಳ, ಉದಗಟ್ಟಿ, ತಳಕಟನಾಳ್ ಸೇರಿದಂತೆ ಅನೇಕ ಗ್ರಾಮಗಳು ನಡುಗಡ್ಡೆಯಾಗಿವೆ. ಇಲ್ಲಿನ ಜನ ಗ್ರಾಮವನ್ನು ಬಿಟ್ಟು ತಮ್ಮ ಅಗತ್ಯ ವಸ್ತುಗಳ ತೆಗೆದುಕೊಂಡು ಹೊರಗೆ ಬಂದಿದ್ದಾರೆ. ಕಾಳಜಿ ಕೇಂದ್ರ ಹಾಗೂ ಸಂಬಂಧಿಕರ ಮನೆಗಳಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement