ತುಂಗಭದ್ರಾ ಜಲಾಶಯದಿಂದ 36,217 ಕ್ಯೂಸೆಕ್ ನೀರು ಬಿಡುಗಡೆ, ಡ್ಯಾಂ ಕೆಳಗಡೆ ಪ್ರದೇಶದಲ್ಲಿ ಪ್ರವಾಹದ ಭೀತಿ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇದ್ದು, ಮುಂಜಾಗ್ರತಾ ಕ್ರಮವಾಗಿ ತುಂಗಭದ್ರಾ ಜಲಾಶಯದ 12 ಕ್ರಸ್ಟ್ ಗೇಟ್​​ಗಳ ಮೂಲಕ ಸದ್ಯ 36,217 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ.
ಭಾನುವಾರ ಜಲಾಶಯದಿಂದ ನದಿಗೆ ನೀರು ಬಿಡಲಾಗಿದೆ. ತುಂಗಭದ್ರಾ ಜಲಾಶಯ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿದೆ. ಅಪಾರ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.
ತುಂಗಭದ್ರಾ ಜಲಾಶಯದಿಂದ ಕಾಲುವೆಗೆ 8,770 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಒಟ್ಟು 45 ಸಾವಿರ ಕ್ಯೂಸೆಕ್ ನೀರನ್ನು ತುಂಗಭದ್ರಾ ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿದೆ .ಒಳಹರಿವಿನ ಪ್ರಮಾಣ ಆಧರಿಸಿ ಮತ್ತಷ್ಟು ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಆಡಳಿತ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜಲಾಶಯದ ಪೂರ್ಣ ಮಟ್ಟ 1,633 ಅಡಿ. ಸದ್ಯ ಜಲಾಶಯದಲ್ಲಿ 1629.35 ಅಡಿ ಇದ್ದು, 87.430 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,91,957 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಲಾಶಯದಲ್ಲಿ 12 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆ ವಿಜಯನಗರ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಹೂವಿನ‌ಹಡಗಲಿ ತಾಲೂಕಿನ ಬ್ಯಾಲಹುಣ್ಸಿ, ಮಕರಬ್ಬಿ, ಕೋಟಿಹಾಳ ಹಾಗು ಬನ್ನಿಮಟ್ಟಿಯಲ್ಲಿ ಪ್ರವಾಹದ ಆತಂಕ ಉಂಟಾಗಿದೆ.
ತುಂಗಭದ್ರಾ ನದಿ ತೀರದಲ್ಲಿ ಮೆಕ್ಕೆಜೋಳ, ಭತ್ತ ಸೇರಿದಂತೆ ಹಲವು ಬೆಳೆಗಳು ಜಲಾವೃತವಾಗಿವೆ. ಬ್ಯಾಲಹುಣ್ಸಿ ಹಾಗೂ ಮಕರಬ್ಬಿ ಗ್ರಾಮಗಳ ಸಂಪರ್ಕದ ಸೇತುವೆ ನೀರಿನಿಂದ ಮುಳುಗಡೆಯಾಗಿದೆ. ಹೀಗಾಗಿ ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಹೂವಿನಹಡಗಲಿಯ ಐತಿಹಾಸಿಕ ಮದಲಗಟ್ಟೆ ಆಂಜನೇಯ ದೇವಸ್ಥಾನಕ್ಕೆ ನೀರು ನುಗ್ಗಿದೆ, ಕೊಪ್ಪಳ ಜಿಲ್ಲೆಯಲ್ಲಿಯೂ ಪ್ರವಾಹದ ಭೀತಿ ಎದುರಾಗಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ: ಸ್ಕೂಟಿಯಲ್ಲಿ ಹೋಗುವಾಗ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement