ಕಿರಿಯರಿಗೆ ಅವಕಾಶ ನೀಡಲು ಸಂಪುಟ ಸೇರದಿರಲು ಶೆಟ್ಟರ ನಿರ್ಧಾರ: ಬಿಎಸ್‍ವೈ

ಬೆಂಗಳೂರು: ಮಾಜಿ ಸಚಿವ ಜಗದೀಶ್ ಶೆಟ್ಟರ್ ಅವರು ಬೆಳಗ್ಗೆ ಬಂದು ಮಾತನಾಡಿದ್ದಾರೆ. ಕಿರಿಯರಿಗೆ ಅವಕಾಶ ನೀಡಲು ಸಂಪುಟ ಸೇರದಿರುವ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಆರ್‍ಎಸ್‍ಎಸ್‍ನ ಕೇಶವಕೃಪಾಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬೆಳಗ್ಗೆ ಬಂದು ಮಾತನಾಡಿದರು. ತಮ್ಮ ನಿರ್ಧಾರದ ಬಗ್ಗೆ ನನಗೆ ತಿಳಿಸಿದರು. ಕಿರಿಯರಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಶೆಟ್ಟರ್ ಹೇಳಿದರು ಎಂದು ತಿಳಿಸಿದರು.
ವಲಸಿಗರಿಗೆ ಸಚಿವ ಸ್ಥಾನ ಕೊಡುವ ಬಗ್ಗೆಮುಖ್ಯಮಂತ್ರಿ ಬೊಮ್ಮಾಯಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಅವರು ಸರ್ಕಾರ ರಚನೆಗೆ ಕಾರಣ ಆದವರು, ಸೂಕ್ತ ಸ್ಥಾನಮಾನ ಕೊಡುವ ಬಗ್ಗೆ ಮಾತನಾಡುತ್ತೇನೆ ಎಂದರು.
ಸಂಪುಟ ರಚನೆ ಬೊಮ್ಮಾಯಿ ಮತ್ತು ವರಿಷ್ಠರಿಗೆ ಬಿಟ್ಟಿದ್ದು, ನಾನು ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಲ್ಲ. ಸಂಪುಟಕ್ಕೆ ತೆಗೆದುಕೊಳ್ಳಿ ಎಂದು ನಾನು ಯಾರನ್ನೂ ಶಿಫಾರಸು ಮಾಡುವುದಿಲ್ಲ. ಏನೇ ಇದ್ದರೂ ಬೊಮ್ಮಾಯಿಯವರನ್ನು ಭೇಟಿ ಆಗಲು ಮುಖಂಡರಿಗೆ, ಕಾರ್ಯಕರ್ತರಿಗೆ ಹೇಳಿದ್ದೇನೆ. ನನ್ನ ಮೇಲೆ ಒತ್ತಡ ಹಾಕಬೇಡಿ ಅಂದಿದ್ದೇನೆ ಎಂದು ತಿಳಿಸಿದರು.
ಬೊಮ್ಮಾಯಿಯವರು ನಿನ್ನೆ ೯ಬುಧವಾರ) ಒಳ್ಳೆಯ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ. ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿ ಒಳ್ಳೆಯ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಆರ್‍ಎಸ್‍ಎಸ್ ಸಮನ್ವಯ ಬೈಠಕ್ ಕುರಿತು ಮಾತನಾಡಿದ ಅವರು, ಬಹಳ ದಿನಗಳ ನಂತರ ಸಂಘ ಪರಿವಾರದವರ ಜೊತೆ ಚರ್ಚೆಗೆ ಅವಕಾಶ ಸಿಕ್ಕಿತ್ತು. ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರತಿ ವಾರ ಜಿಲ್ಲೆಗಳಿಗೆ ಭೇಟಿಗೆ ನಿರ್ಧರಿಸಲಾಗಿದೆ. ಗಣಪತಿ ಹಬ್ಬದ ಬಳಿಕ ಜಿಲ್ಲೆಗಳಿಗೆ ಪ್ರತಿ ವಾರ ಭೇಟಿ ನೀಡಲಾಗುವುದು. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಸಂಘಟನೆ ಬಲಪಡಿಸುವ ಕೆಲಸ ಮಾಡುತ್ತೇನೆ. ಅಧಿಕಾರ ಇಲ್ಲದಿದ್ದರೂ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement