(ಆಗಸ್ಟ್ ೧ ರಂದು ಡಾ. ಪ್ರಭಾಕರ ಕೋರೆ ಅವರ ೭೪ ನೇ ಜನ್ಮದಿನವಾಗಿದ್ದು, ಅದರ ನಿಮಿತ್ತ ಲೇಖನ)
ಜ್ಞಾನ ದೀವಿಗೆ, ಇಲ್ಲಿ ಲಕ್ಷಾಂತರ ಮಂದಿಯ ಬಾಳು ಬೆಳಗಿದೆ. ಏಳು ಶಿಕ್ಷಕರಿಂದ ಆರಂಭವಾದ ಪುಟ್ಟ ಸಂಸ್ಥೆ, ಕೆಎಲ್‌ಇ ಇಂದು ಹೆಮ್ಮರವಾಗಿ ಬೆಳೆದಿದ್ದು, ರಾಜ್ಯ, ರಾಷ್ಟ್ರದ ಮಾತ್ರವಲ್ಲ. ವಿದೇಶಗಳ ವಿದ್ಯಾಸಕ್ತರ ಜ್ಞಾನದಾಹ ಇಂಗಿಸುವಲ್ಲಿ ಯಶಸ್ವಿಯಾಗಿದೆ.
ಸಾಮಾನ್ಯ ಶಿಕ್ಷಣ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಕಾನೂನು ತರಬೇತಿ, ವಾಣಿಜ್ಯ ವ್ಯವಹಾರ, ನಿರ್ವಹಣೆ, ಆರೋಗ್ಯ, ಶಿಕ್ಷಣ, ಕೃಷಿ, ಹೊಟೇಲ್, ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಇಂದು ಕೆಎಲ್‌ಇ ವಿಸ್ತಾರವಾಗಿ ಹರಡಿಕೊಂಡಿವೆ. ಈ ಯಶಸ್ವಿ ಸಂಸ್ಥೆಯ ರೂವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವರೇ ಕೆಎಲ್‌ಇ ಸಂಸ್ಥೆಯ ಕ್ರೀಯಾಶೀಲ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬಿ. ಕೋರೆ ಅವರು.
ಸಮಸ್ಯೆಗಳಿಗೆ ಪರಿಹಾರ ಕಾಣುವ ದೃಷ್ಟಿ ;
ಸಮಸ್ಯೆಗಳನ್ನು ಬಿಡಿಸುವ ಬೌದ್ಧಿಕ ಪ್ರೌಢಿಮೆ; ಸಮರ್ಪಕ ನಿರ್ಧಾರ ಕೈಗೊಳ್ಳುವ ಕರ್ತೃತ್ವ ಶಕ್ತಿ; ಕಾರ್ಯಶಕ್ತಿ, ವಿಶ್ವಾಸವನ್ನು ಬಿತ್ತಿ ಬೆಳೆಯುವ ಕೌಶಲ್ಯ ಎಲ್ಲಕ್ಕಿಂತ ಹೆಚ್ಚಾಗಿ ಇಡೀ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ- ಈ ಕಾರಣದಿಂದಾಗಿಯೇ ಕೋರೆ ಅವರು ವಿಶಿಷ್ಟ ಶಕ್ತಿಯಾಗಿ ಬೆಳೆದಿದ್ದಾರೆ ಎನ್ನುತ್ತಾರೆ ಸಹೃದಯಿಗಳು.
ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿಯಲ್ಲಿ ಆಗಸ್ಟ್ ೧, ೧೯೪೭ ರಂದು ಜನಿಸಿದಡಾ.ಕೋರೆಯವರಿಗೆ ಸಮಾಜ ಸೇವೆ ಹಿರಿಯರಿಂದ ಬಂದ ಬಳುವಳಿ. ಸ್ವಾತಂತ್ರ್ಯ ಹೋರಾಟಗಾರರಿದ್ದ ತಂದೆ ಬಸವಪ್ರಭು ಕೋರೆ, ತಾಯಿ ಶಾರದಾದೇವಿ ಇಬ್ಬರೂ ಇದನ್ನೇ ಜೀವನವಾಗಿಸಿಕೊಂಡವರು. ಕೋರೆಯವರು ವಿದ್ಯಾರ್ಥಿ ದೆಸೆಯಿಂದಲೂ ಕ್ರಿಯಾಶೀಲ ಸಂಘಟಕರು. ಅನೇಕ ಸಂಘ- ಸಂಸ್ಥೆಗಳ ಅಧ್ಯಕ್ಷರಾಗಿ , ಸಂಸ್ಥಾಪಕರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ರಾಜ್ಯ ಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ರಚನಾತ್ಮಕ ಕಾರ್ಯ ಮಾಡಿದ ಅವರಿಗೆ ‘ಪ್ರಭಾಂಕಲಿ’ ಮತ್ತು ‘ಸ್ಪಂದನ’ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗಿದೆ. ಉತ್ತರಾಯಣ ಕೃತಿಯ ಮೂಲಕ ಸಾಹಿತ್ಯ-ಸಂಸ್ಕೃತಿಯನ್ನು ಶ್ರೀಮಂತಗೋಳಿಸಿದ್ದಾರೆ. ಡಾ.ಸತೀಶ.ಕೆ.ಪಾಟೀಲ ಅವರು ಹಂಪಿ ವಿಶ್ವವಿದ್ಯಾಲಯದಿಂದ ಡಾ. ಪ್ರಭಾಕರ ಕೋರೆ ಅವರ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೊಡುಗೆಗಳು ಕುರಿತು ಪಿ.ಎಚ್.ಡಿ. ಪದವಿ ಪಡೆದಿದ್ದಾರೆ.
ಶಿಕ್ಷಣದ ಜೊತೆಗೆ ಸಾಹಿತ್ಯ-ಸಂಸ್ಕೃತಿಯಲ್ಲೂ ಸಹಕಾರ ಕ್ಷೇತ್ರದಲ್ಲೂ ವಿಶೇಷ ಆಸಕ್ತಿ;
ಈ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದವರಿಗೆ ಗೌರವ ಸಮರ್ಪಿಸುವುದು ಇವರ ಸಂಪ್ರದಾಯ. ಜೈಂಟ್ಸ್ ಇಂಟರ್‌ನ್ಯಾಷನಲ್ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಗಳು ಅವರನ್ನು ಅರಿಸಿಕೊಂಡು ಬಂದಿವೆ. ಹಲವಾರು ಪುರಸ್ಕಾರಗಳು ಅವರಿಗೆ ಸಂದಿವೆ. ಭಾರತ ಸರಕಾರ ಮಾನ್ಯತೆ ಪಡೆದ ಭಾರತೀಯ ಸಕ್ಕರೆ ತಂತ್ರಜ್ಞರ ಒಕ್ಕೂಟದ ಜೀವನಮಾನ ಸಾಧನೆ, ದಿ ಡೋಯನ್ಸ್-ಗಾರ್ಡಯನ್ಸ್ ಆಫ್ ನಾಲೆಜ್, ಅಮೇರಿಕಾದ ನ್ಯೂಯಾರ್ಕನಿನ ರೋಟರಿ ಕ್ಲಬ್ ಗಿಫ್ಟ್ ಲೈಫ್ ಪೌಂಢೇಶನ್ನಿನ ‘ಎಂಜಿಲ್, ಸಿರಿಕನ್ನಡ ಗೌರವ, ಶ್ರೀ ಮೃತ್ಯುಂಜಯ ಮಹಾಂತ, ವಿಶ್ವ ಚೇತನ, ಶ್ರೇಷ್ಠ ಶಿಕ್ಷಣ ತಜ್ಞ ಮುಂತಾದ ಪ್ರಶಸ್ತಿಗಳು ಸಂದಿವೆ. ರಾಜ್ಯ ಸಭಾ ಸದಸ್ಯರಾಗಿದ್ದ ಅವರು ರಕ್ಷಣಾ, ಗೃಹ ಮಂಡಳಿ, ಟೆಲಿಕಾಂ, ಆರೋಗ್ಯ, ರೈಲ್ವೆ ಇಲಾಖೆ, ಸ್ಥಾಯಿ ಯೋಜನಾ ಮತ್ತು ವಾಸ್ತುಶಿಲ್ಷ ಶಾಲೆಯ ಸಾಮಾನ್ಯ ಪರಿಷತ್ತು, ಹಿಂದಿ ಪ್ರಚಾರ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಮುಂತಾದ ಸಮಿತಿಗಳ ಸದಸ್ಯರಾಗಿ ವಿಶಿಷ್ಟ ಮತ್ತು ಅನುಪಮ ಸೇವೆ ಸಲ್ಲಿಸಿದ್ದಾರೆ.
ನಾಡಿನ ಎಲ್ಲೆಡೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಾಡಿನ ಆಸ್ತಿಯಾಗಿ ಬೆಳೆದಿದ್ದಾರೆ. ಯುವಸಮೂಹದ ಬಗ್ಗೆ ವಿಶೇಷ ವಿಶ್ವಾಸ ಕಳಕಳಿ, ಕಮರಿಹೋಗುತ್ತಿದ್ದ ಅಸಂಖ್ಯಾತ ಮಕ್ಕಳ ಭವಿಷ್ಯ ರೂಪಿಸಿದ ರೂವಾರಿ ಎನಿಸಿಕೊಂಡಿದ್ದಾರೆ. ೧೯೮೪ ರಿಂದ ಕೆಎಲ್‌ಇ ಸಂಸ್ಥೆಯ ಆಡಳಿತ ಕರ್ಣಧಾರತ್ವವನ್ನು ವಹಿಸಿಕೊಂಡು, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಕೆಎಲ್‌ಇ ಸಂಸ್ಥೆಯ ೨೭೦ಕ್ಕೂ ಹೆಚ್ಚಿನ ಸಂಸ್ಥೆಗಳನ್ನು ೧೬,೦೦೦ ಸಿಬ್ಬಂದಿ ೧,೨೫,೦೦೦ ವಿದ್ಯಾರ್ಥಿಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ, ವೈಜ್ಞಾನಿಕ, ತಾಂತ್ರಿಕ, ನೈತಿಕ, ವೈಚಾರಿಕ, ಉನ್ನತ ಮೌಲ್ಯಗಳನ್ನು ಬೆಳೆಸುತ್ತಾ, ಗುಣಾತ್ಮಕ ಶಿಕ್ಷಣ ಮತ್ತು ಸೇವೆಯೊಂದಿಗೆ ಮುನ್ನಡೆಯುತ್ತಿವೆ. ಜಾಗತಿಕ ಮಟ್ಟದ ವಿವಿಧ ವಿವಿಗಳೊಂದಿಗೆ ಸಹಯೋಗ ಹೊಂದಿರುವ ಸಂಸ್ಥೆಗೆ ಗುಣಮಟ್ಟದ ಶಿಕ್ಷಣವೇ ಯಶಸ್ಸಿನ ಮಂತ್ರ. ಈ ಕಾರಣದಿಂದಾಗಿಯೇ ಸ್ವಾಯತ್ವ ವಿಶ್ವ ವಿದ್ಯಾಲಯ ಎಂಬ ಗೌರವ ಸಿಕ್ಕಿದೆ.
ಕೈಗೆಟಕುವ ವೆಚ್ಚದಲ್ಲಿ ಅತ್ಯಾಧುನಿಕ ಆರೋಗ್ಯಸೇವೆ ಜನಸಾಮಾನ್ಯರಿಗೂ ಕೈಗೆಟುಕಬೇಕು ಎನ್ನುವುದು ಇವರ ಇನ್ನೊಂದು ಕನಸು. ಇದನ್ನು ನನಸಾಗಿಸುವ ಪ್ರಯತ್ನವಾಗಿ ವಿದೇಶಿ ವಿವಿಗಳ ಸಹಯೋಗದಲ್ಲಿ ನೂರು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಸಾವಿರ ಹಾಸಿಗೆಯ ಹೈಟೆಕ್ ಆಸ್ಪತ್ರೆ ನಿರ್ಮಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಉಚಿತ ವೈದ್ಯಕೀಯ ಸೇವೆ ಒದಗಿಸಿ ಲಕ್ಷಾಂತರ ಮಂದಿಗೆ ಆರೋಗ್ಯ ಭಾಗ್ಯ ಕಲ್ಪಿಸಿ ಕೊಟ್ಟಿದ್ದಾರೆ. ರಾಜ್ಯದ ವಿಧಾನ ಮಂಡಲ ಅಧಿವೇಶನ ಬೆಳಗಾವಿಯಲ್ಲಿ ಯಶಸ್ವಿಯಾಗಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡಾ. ಪ್ರಭಾಕರ ಕೋರೆ ಅವರು ಪತ್ನಿ ಶ್ರೀಮತಿ ಆಶಾ, ಮಕ್ಕಳಾದ ಪ್ರೀತಿ, ದೀಪ್ತಿ, ಮತ್ತು ಅಮಿತ, ಸಂಬಂಧಿಗಳು, ಹಿತೈಷಿಗಳು ಮತ್ತು ಸ್ನೇಹಿತರ ಅವರ ಸಹಾಯ ಹಸ್ತವನ್ನು ಸದಾ ನೆನೆಯುತ್ತಾರೆ.
ಹುಬ್ಬಳ್ಳಿಯ ಗೋಕಲ ರಸ್ತೆಯ ಸುಚಿರಾಯು ಮತ್ತು ಕೊಯಿನ್ ರಸ್ತೆಯಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದಾರೆ. ೨೦೨೧-೨೨ ರಿಂದ ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯನ್ನು ಅಣಿಗೊಳಿಸುತ್ತಿದ್ದಾರೆ.
ಕೆಎಲ್‌ಇ ಸಂಸ್ಥೆಯ ಪ್ರಸಾರಾಂಗದ ಮೂಲಕ ೧೧೫ ಕ್ಕೂ ಹೆಚ್ಚಿನ ಗ್ರಂಥಗಳನ್ನು ಪ್ರಕಟಿಸಿದ್ದಾರಲ್ಲದೆ, ಕೆಎಲ್‌ಇ ವಾರ್ತಾ ಪತ್ರ ತ್ರೈಮಾಸಿಕವನ್ನು ೨೦೦೧ ರಿಂದ ಪ್ರಕಟಿಸುತ್ತಿದ್ದಾರೆ. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಕೆಎಲ್‌ಇ ಎಫ್.ಎಂ ಬಾನುಲಿ ಕೇಂದ್ರಗಳನ್ನು ಸ್ಥಾಪಿಸಿ ಆ ಮೂಲಕ ಸಮುದಾಯದ ಸೇವೆ ಸಲ್ಲಿಸುತ್ತಿದ್ದಾರೆ. ಕರೋನಾ ವೈರಸ್ ಹೋರಾಟಕ್ಕೆ ಸಂಸ್ಥೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೨ ಕೋಟಿ ಸಹಾಯ ನಿಧಿಯನ್ನು ಅರ್ಪಿಸಿದ್ದಾರೆ.
ಸಂಸ್ಥೆಯ ಹಿರಿಯ ನಿರ್ದೇಶಕರಾದ ಶಂಕರಣ್ಣ ಆಯ್. ಮುನವಳ್ಳಿ ಮತ್ತು ಇತರ ನಿರ್ದೇಶಕರು, ಅಜೀವ ಸದಸ್ಯರು ಡಾ. ಕೋರೆ ಅವರ ದೂರದೃಷ್ಟಿತ್ವ ಮತ್ತು ಯೋಜನೆಗಳಿಂದಾಗಿ ಕೆಎಲ್‌ಇ ಸಂಸ್ಥೆ ಪ್ರಗತಿಪರ ಕಾರ್ಯಗಳನ್ನು ಮಾಡುತ್ತಿವೆ ಎಂದು ಸಂತಸ ವ್ಯಕ್ತ ಪಡಿಸುತ್ತಾರೆ.
ಸ್ನೇಹಪರತೆ, ಪಾದರಸದಂಥ ವ್ಯಕ್ತಿತ್ವ, ಸಮಯೋಚಿತ ನಿರ್ಣಯ ಕೈಗೊಂಡು, ತ್ವರಿತ ಕಾರ್ಯಚಾರಣೆಗಳು ಕೋರೆ ಅವರ ಯಶಸ್ಸಿನ ಸೂತ್ರಗಳಾಗಿವೆ. ಜ್ಞಾನದಾಸೋಹ ಜೊತೆಗೆ ಗಡಿಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುವ ವಿಧೇಯಕ ಕಾರ್ಯದಲ್ಲೂ ಸಕ್ರಿಯವಾಗಿ ಡಾ. ಪ್ರಭಾಕರ ಕೋರೆ ತೊಡಿಗಿಸಿಕೊಂಡಿದ್ದಾರೆ. ಸಂಸ್ಥೆಯನ್ನು ಹುಟ್ಟುಹಾಕಿದ ಸಪ್ತರ್ಷಿಗಳ ಆಶೀರ್ವಾದ, ದಾನಿಗಳ ನೆರವು, ಆಡಳಿತ ಮಂಡಳಿಯ ಕ್ರಿಯಾಶೀಲತೆ, ಸಿಬ್ಬಂದಿಗಳು ಸೇವೆ, ಕರ್ತವ್ಯ ನಿಷ್ಠೆ, ಕಾರ್ಯತತ್ಪರತೆಯೇ ಕೆಎಲ್‌ಇ ಸಂಸ್ಥೆಯ ಬೆಳವಣಿಗೆಗೆ ಕಾರಣ ಎಂದು ಸೌಜನ್ಯದಿಂದಲೇ ನುಡಿಯುತ್ತಾರೆ. ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಕೋರೆಯವರಿಂದ ಇನ್ನೂ ಹೆಚ್ಚಿನ ಶೈಕ್ಷಣಿಕ ಸಾಮಾಜಿಕ ಕಾರ್ಯಗಳು ನಡೆಯಲಿ ಎಂಬುದು ಎಲ್ಲರ ಸದಾಶಯ.
– ಬಿ.ಎಸ್.ಮಾಳವಾಡ ನಿವೃತ್ತ ಗ್ರಂಥಪಾಲಕರು
ನಿಮ್ಮ ಕಾಮೆಂಟ್ ಬರೆಯಿರಿ