ಬೆಂಗಳೂರು: ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿ ಹಲ್ಲೆಗೆ ಮುಂದಾಗಿದ್ದ ಆಫ್ರಿಕನ್ ಪ್ರಜೆಗಳ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ.
ನಗರದ ಜೆ.ಸಿ.ನಗರ ಪೊಲೀಸ್ ಠಾಣೆ ಎದುರು ಲಾಠಿಚಾರ್ಜ್ ನಡೆಸಲಾಗಿದ್ದು, ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆ ಮೃತಪಟ್ಟ ಕಾರಣ ಠಾಣೆ ಮುಂದೆ ಧರಣಿ ನಡೆಸುತ್ತಿದ್ದ ಆಫ್ರಿಕನ್ ಪ್ರಜೆಗಳು ಪೊಲೀಸರ ಜತೆ ವಾಗ್ವಾದ, ಹಲ್ಲೆಗೆ ಯತ್ನಿಸಿದ ಕಾರಣ ಲಾಠಿಚಾರ್ಜ್ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜೆ ಸಿ ನಗರ ಪೊಲೀಸ್ ಠಾಣೆ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಡ್ರಗ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಜೆ.ಸಿ.ನಗರ ಪೊಲೀಸರ ವಶದಲ್ಲಿದ್ದ ಈತನ ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮೃತ ಜೋಯೆಲ್ ಮಲು ಕಾಮಗೋದೇಶದ ಪ್ರಜೆ ಎಂದು ಹೇಳಲಾಗಿದ್ದು, ಕೆ.ಆರ್ ಪುರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. 2015ರ ಜುಲೈ 20ರಂದು ಸ್ಟೂಡೆಂಟ್ ವೀಸಾ ಪಡೆದು ಇಲ್ಲಿಗೆ ಬಂದಿದ್ದ. ಆದರೆ, 2017ರ ಡಿಸೆಂಬರ್ 13ರಂದು ವೀಸಾ ಅವಧಿ ಮುಕ್ತಾಯವಾಗಿದೆ ಎಂದು ಗೊತ್ತಾಗಿದೆ.
ಆಫ್ರಿಕಾ ಪ್ರಜೆ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ 5 ಗ್ರಾಂ ಎಂಡಿಎಂಎ ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಎದೆನೋವು ಮತ್ತು ಶೀತ ಇದೆ ಎಂದು ಆಫ್ರಿಕಾ ಪ್ರಜೆ ಪೊಲೀಸರಿಗೆ ತಿಳಿಸಿದ್ದ. ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಪೊಲೀಸರು ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಆತನ ಗುರುತು ಈವರೆಗೂ ಪತ್ತೆಯಾಗಿಲ್ಲ. ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿಸದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆಫ್ರಿಕನ್ ಪ್ರಜೆಗಳು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ