ಬುಧವಾರ ಸಚಿವ ಸಂಪುಟ ಪ್ರಮಾಣ ವಚನ ಸಾಧ್ಯತೆ, ಬಿಎಸ್‌ವೈ ಪುತ್ರ ವಿಜಯೇಂದ್ರ ಸೇರ್ಪಡೆ ?

ನವದೆಹಲಿ: ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಾಗುವುದು ಆದರೆ ಎಲ್ಲ ಶಾಸಕರನ್ನು ಸಚಿವರನ್ನಾಗಿಸಲು ಸಾಧ್ಯವಿಲ್ಲ. ಒಂದು ಸಮತೋಲಿತ ಸಂಪುಟವನ್ನು ರಚನೆ ಮಾಡಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರ ಕೇಂದ್ರದ ಗೃಹ ಸಚಿವ ಅಮಿತ್ ಶಾ ಭೇಟಿಗೆ ಸಂಸತ್ ಭವನಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಪುಟ ವಿಸ್ತರಣೆಗಾಗಿ ಪಕ್ಷವು ಪ್ರಮುಖ ಸೂತ್ರವೊಂದನ್ನು ಸಿದ್ಧಪಡಿಸಲಿದೆ. ‘ಉಪ ಮುಖ್ಯಮಂತ್ರಿ ಯಾರಾಗಬೇಕು, ಎಷ್ಟು ಹಂತದಲ್ಲಿ ವಿಸ್ತರಣೆ ಆಗಬೇಕು, ಎಷ್ಟು ಜನ ಸಂಪುಟದಲ್ಲಿರಬೇಕು’ ಎಂಬುದು ಆ ಸೂತ್ರದ ಭಾಗ ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಪ್ರಮುಖರನ್ನು ಹೊಸ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಂಡು ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ. ಪ್ರಾದೇಶಿಕತೆ, ಜಾತಿ, ಹಿರಿತನಕ್ಕೆ ಆದ್ಯತೆ ನೀಡುವ ಬಗ್ಗೆ ವರಿಷ್ಠರೇ ನಿರ್ಧರಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಸೋಮವಾರ ಸಂಜೆ ಅಥವಾ ಮಂಗಳವಾರ ವರಿಷ್ಠರು ಅಂತಿಮ ಪಟ್ಟಿಗೆ ಸಮ್ಮತಿ ಸೂಚಿಸಿದರೆ ಬುಧವಾರದ ವೇಳೆಗೆ ಹೊಸ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಇಲ್ಲದಿದ್ದರೆ ಸಮಾರಂಭ ಮತ್ತಷ್ಟು ವಿಳಂಬ ಆಗಲಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಹುಡುಗಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ; ಯುವಕನ ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗಾ ಥಳಿತ

ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ?
ಈ ಮಧ್ಯೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ತಮ್ಮ ಪುತ್ರ ವಿಜಯೇಂದ್ರಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ರಚನೆ ಕುರಿತಂತೆ ಈಗಾಗಲೇ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು ಸಂಜೆ ನಂತರದಲ್ಲಿ ನೂತನ ಸಚಿವರ ಪಟ್ಟಿಯೊಂದಿಗೆ ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ ಎನ್ನಲಾಗಿದ್ದು, ಈ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರು ಇರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ವಿಜಯೇಂದ್ರ ಸೇರ್ಪಡೆ ಬಗ್ಗೆ ದೆಹಲಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಈ ಬಗ್ಗೆ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದಷ್ಟೆ ಹೇಳಿದ್ದಾರೆ. ಸಚಿವ ಸಂಪುಟದಲ್ಲಿ ಕೆಲವು ಹಿರಿಯ ಸಚಿವರಿಗೆ ಕೊಕ್‌ ಕೊಡುವ ಸಾಧ್ಯತೆ ಇದ್ದು ಅನೇಕ ಕಿರಿಯರು ಸಚಿವ ಸಂಪುಟದಲ್ಲಿ ಪ್ರಮುಖ ಖಾತೆನಿರವಹಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement