ದೆಹಲಿ: ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ; ಕೇಜ್ರಿವಾಲ್

ನವದೆಹಲಿ: ದೇಶದ ರಾಜಧಾನಿಯಲ್ಲಿ 9 ವರ್ಷದ ದಲಿತ ಬಾಲಕಿಯ ಅತ್ಯಾಚಾರಗೈದು, ಆಕೆಯನ್ನು ಹತ್ಯೆಗೈದ ಘೋರ ಕೃತ್ಯದ ಬಗ್ಗೆ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಬಾಲಕಿಯ ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರ ಕೂಡಾ ನೀಡಲಾಗುವುದೆಂದು ಅವರು ಘೋಷಿಸಿದ್ದಾರೆ. ದೆಹಲಿಯಲ್ಲಿ ಮೃತ ಬಾಲಕಿಯ ಕುಟುಂಬದವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ” ಹುಡುಗಿ ಮತ್ತೆ ಮರಳಿ ಬರಲಾರಳು.ಆಕೆಯ ಕುಟುಂಬದವರಿಗೆ ಅನ್ಯಾಯವಾಗಿರುವುದನ್ನು ಎಂದೂ ಪರಿಹರಿಸಲು ಸಾಧ್ಯವಿಲ್ಲ. ಅವರಿಗೆ ದೆಹಲಿ ಸರಕಾರವು 10 ಲಕ್ಷ ರೂ.ಗಳ ಪರಿಹಾರಧನ ನೀಡಲಿದೆ ಹಾಗೂ ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಿದೆ” ಎಂದು ಹೇಳಿದರು.
ಪ್ರಕರಣದ ಆರೋಪಿಗಳಿಗೆ ಮರಣದಂಡನೆ ಯಾಗಬೇಕೆಂದು ಆಗ್ರಹಿಸಿ, ನೈಋತ್ಯ ದಿಲ್ಲಿಯಲ್ಲಿರುವ ಘಟನೆ ನಡೆದ ಸ್ಥಳದಲ್ಲಿ ಮಂಗಳವಾರ ಬಾಲಕಿಯ ಹೆತ್ತವರೊಂದಿಗೆ ನೂರಾರು ಸ್ಥಳೀಯರು ಪ್ರತಿಭಟನೆ ನಡೆಸಿದರು.
ಅರವಿಂದ್ ಕೇಜ್ರಿವಾಲ್ ಅವರು ಬಾಲಕಿಯ ಹೆತ್ತವರನ್ನು ಭೇಟಿಯಾಗಲು ಸ್ಥಳಕ್ಕೆ ಆಗಮಿಸಿದಾಗ, ಪ್ರತಿಭಟನಾ ಕಾರರು ಮುಖ್ಯಮಂತ್ರಿಯನ್ನು ಸುತ್ತುವರಿದು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆಗ ಕೇಜ್ರಿವಾಲ್ ಧರಣಿ ನಿರತರ ಜೊತೆ ಮಾತನಾಡಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದನ್ನು ಖಾತರಿ ಪಡಿಸಲು ತನ್ನ ಸರಕಾರವು ಉನ್ನತ ನ್ಯಾಯವಾದಿಗಳನ್ನು ನೇಮಿಸಲಿದೆ. ದೆಹಲಿಯಲ್ಲಿ ಕಾನೂನು, ಸುವ್ಯವಸ್ಥೆ ಬಲಪಡಿಸಲು ಸದೃಢವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡುವುದಾಗಿ ಅವರು ತಿಳಿಸಿದರು.
ನೈಋತ್ಯ ದೆಹಲ್ಲಿರುವ ತನ್ನ ತಂದೆತಾಯಿಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬಾಲಕಿಯು, ರವಿವಾರ ಸಂಜೆ 5:30ರ ಸುಮಾರಿಗೆ ಸಮೀಪದ ಚಿತಾಗಾರದಲ್ಲಿರುವ ನೀರಿನ ಕೂಲರಿನಲ್ಲಿ ನೀರು ತರುವುದಾಗಿ ಹೇಳಿ ಹೋದವಳು ಹಿಂತಿರುಗಿ ಬರಲಿಲ್ಲ. ಆನಂತರ ಬಾಲಕಿ ಮನೆಯವರಿಗೆ ಪರಿಚಯವಿರುವ ಶಂಕಿತ ಆರೋಪಿಗಳು, ಕರೆ ಮಾಡಿ ಆಕೆಯ ಮಗಳು ಚಿತಾಗಾರದ ಕೂಲರಿನಿಂದ ನೀರು ಸಂಗ್ರಹಿಸುತ್ತಿದ್ದಾಗ ವಿದ್ಯುದಾಘಾತಕ್ಕೊಳಗಾಗಿ ಮೃತಪಟ್ಟಿರುವುದಾಗಿ ತಿಳಿಸಿದರು ಮತ್ತು ಸ್ಥಳಕ್ಕೆ ಧಾವಿಸಿದ ಬಾಲಕಿಯ ಮನೆಯವರಿಗೆ ಸುಟ್ಟು ಕರಕಲಾದ ಮೃತದೇಹವನ್ನು ತೋರಿಸಿದ್ದರು.
ಪ್ರಕರಣಕ್ಕೆ ಸಂಬಂದಿಸಿ ಪೊಲೀಸರು ಸ್ಮಶಾನದ ಪುರೋಹಿತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಘಟನೆಯ ಬಗ್ಗೆ ದಿಲ್ಲಿ ಮಹಿಳಾ ಆಯೋಗವು ಈಗಾಗಲೇ ತನಿಖೆಯನ್ನು ಆರಂಭಿಸಿದೆ

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement