೪.೫೦ ಕೋಟಿ ರೂ.ಮೌಲ್ಯದ ರಕ್ತಚಂದನ ವಶ, ಇಬ್ಬರ ಬಂಧನ

ಬೆಂಗಳೂರು: ಅಕ್ರಮವಾಗಿ ದಾಸ್ತಾನು ಮಾಡಿಟ್ಟು ಹೊರ ದೇಶಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕೂವರೆ ಕೋಟಿ ರೂ. ಮೌಲ್ಯದ ರಕ್ತಚಂದನ ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ಕಮ್ಮನಹಳ್ಳಿಯ ಆನಂದ್‌ಕುಮಾರ್ (೫೧), ಅನಿಲ್‌ಸಿಂಘಿ (೪೭) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ೪.೫ ಕೋಟಿ ರೂ. ಮೌಲ್ಯದ ೯೧೩೫ ಕೆಜಿ ತೂಕದ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತಿಳಿಸಿದ್ದಾರೆ.
ಹುಳಿಮಾವುವಿನ ಗೊಟ್ಟಿಗೆರೆ ಮುಖ್ಯರಸ್ತೆಯಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಓಲ್ಡ್‌ಎಂಡೋವರ್ ಕಾರನ್ನು ಖಚಿತ ಮಾಹಿತಿಯಾಧರಿಸಿ ತಡೆದು ತಪಾಸಣೆ ನಡೆಸಲಾಯಿತು.
ತಪಾಸಣೆಯಲ್ಲಿ ಕಾರಿನ ಸೀಟಿನಡಿ ರಕ್ತಚಂದನ ಮರದ ತುಂಡುಗಳನ್ನು ತುಂಬಿಕೊಂಡಿರುವುದು ಪತ್ತೆಯಾಗಿದ್ದು, ಸಾಗಿಸುತ್ತಿದ್ದ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಜೊತೆ ಸೇರಿ ಆಂಧ್ರದ ಚಿತ್ತೂರಿನಿಂದ ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಿಕೊಂಡು ಬಂದು ಸಮುದ್ರ ಮಾರ್ಗವಾಗಿ ವಿದೇಶಕ್ಕೆ ಸಾಗಿಸುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ಬನ್ನೇರುಘಟ್ಟ ರಸ್ತೆಯ ಹೊಮ್ಮದೇವನಹಳ್ಳಿ ಬಳಿ ಗೋಡೌನ್‌ವೊಂದನ್ನು ಬಾಡಿಗೆ ಪಡೆದುಕೊಂಡು ಅದರಲ್ಲಿ ದಾಸ್ತಾನು ಮಾಡಿದ್ದರು. ಅಲ್ಲಿಂದ ಸ್ಯಾಂಪಲ್‌ಗೆ ಮರದ ತುಂಡುಗಳನ್ನು ಗಿರಾಕಿಗಳಿಗೆ ತೋರಿಸಲು ಕಾರಿನಲ್ಲಿ ಸುತ್ತಾಡುತ್ತಿರುವುದು ಪತ್ತೆಯಾಗಿದೆ.
ಗೋಡೌನ್ ಮೇಲೆ ದಾಳಿ ನಡೆಸಿ ಅದರಲ್ಲಿದ್ದ ೪.೫ ಕೋಟಿ ರೂ. ಮೌಲ್ಯದ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಡಿಸಿಪಿ ಅಂಗಡಿ ನೇತೃತ್ವದ ತಂಡವು ಯಶಸ್ವಿ ಕಾರ್ಯಾಚರಣೆ ಕೈಗೊಂಡಿದೆ. ಚೀನಾದಲ್ಲಿ ರಕ್ತ ಚಂದನಕ್ಕೆ ಭಾರಿ ಬೇಡಿಕೆ ಇದ್ದು, ಅಲ್ಲಿಗೆ ತುಂಡುಗಳನ್ನು ಕಳ್ಳ ಸಾಗಾಣೆ ಮೂಲಕ ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.
ಯಶಸ್ವಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸ್‌ ತಂಡಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಅವರು ೭೫ ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು, ಇತರರ ನಿವಾಸದ ಮೇಲೆ ಐಟಿ ದಾಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement