ಮೈಸೂರು ವಿವಿ ಪ್ರಾಧ್ಯಾಪಕನ ವಿರುದ್ಧ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪಿಸಿ ಪತ್ನಿಯಿಂದಲೇ ದೂರು, ನಡೆದಿಲ್ಲ ಎಂದ ವಿದ್ಯಾರ್ಥಿನಿ..!

ಮೈಸೂರು: ನನ್ನ ಪತಿಯು ಪಿಎಚ್‌ಡಿ ಸಂಶೋಧನೆ ನಡೆಸುತ್ತಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪತ್ನಿ ದೂರಿದರೆ, ಪತಿ-ಪತ್ನಿಯ ಜಗಳದಲ್ಲಿ ನನ್ನನ್ನು ಎಳೆತರಲಾಗಿದೆ. ನನ್ನ ಮೇಲೆ ಯಾರೂ ಅತ್ಯಾಚಾರ ನಡೆಸಿಲ್ಲ ಎಂದು ಯುವತಿ ಹೇಳಿಕೆ ನೀಡಿರುವ ವಿಚಿತ್ರ ಪ್ರಸಂಗ ಮೈಸೂರು ನಗರದಲ್ಲಿ ನಡೆದಿದೆ. ಹೀಗಾಗಿ ಈಗ ಈ ಪ್ರಕರಣದಲ್ಲಿ ಪೊಲೀಸರೇ ಗೊಂದಲಕ್ಕೆ ಒಳಗಾಗಿದ್ದಾರೆ.
ನಗರದ ಮೈಸೂರು ವಿವಿ ಪ್ರಾಧ್ಯಾಪಕರೊಬ್ಬರ ಮೇಲೆ ಆಕೆಯ ಪತ್ನಿಯೇ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಈ ಪ್ರಕರಣವು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯ ಮೆಟ್ಟಲೇರಿದೆ. ಘಟನೆಯ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಪೊಲಿಸರು ಗೊಂದಲಕ್ಕೊಳಗಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಾಧ್ಯಾಪಕರ ಪತ್ನಿ, ಗುರುವಾರ ಮಧ್ಯಾಹ್ನ ನಾನು ಸ್ಟಡಿ ಮೆಟೀರಿಯಲ್ ತರಲೆಂದು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಯುವತಿಯ ಚೀರಾಟ ಕೇಳಿಬಂತು. ನಾನು ಕೂಡಲೇ ಮನೆಯೊಳಗೆ ತೆರಳಿದಾಗ ಓಡಿ ಬಂದ ಯುವತಿಯು ಬಂದು ಕಾಪಾಡುವಂತೆ ಬೇಡಿಕೊಂಡಳು.
ನಿಮ್ಮ ಪತಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದಳು. ಕೂಡಲೇ ಆಕೆಯನ್ನು ಸಂತೈಸಿ ಆಕೆಯಿಂದ ದೂರು ಪತ್ರ ಬರೆಸಿ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಕರೆದೊಯದಿದ್ದೇನೆ. ನನ್ನ ಗಂಡನ ವಿರುದ್ಧ ಈ ಹಿಂದೆಯೂ ಕೂಡ ಇಂತಹುದೇ ದೂರು ಬಂದಿತ್ತು. ಆದರೆ, ತೊಂದರೆಗೊಳಗಾದವರು ಮುಂದೆ ಬರದ ಕಾರಣ ಸುಮ್ಮನಾಗಿದ್ದೆ ಎಂದು ಹೇಳಿದ್ದಾರೆ.
ಈ ಸಂಬಂಧ ಪೊಲೀಸರು ಠಾಣೆಗೆ ಪ್ರಾಧ್ಯಾಪಕರನ್ನು ಕರೆಸಿದ್ದಾರೆ. ಆದರೆ ಪೊಲೀಸರು ಹೇಳುವಂತೆ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ಯುವತಿ ಹೇಳಿದ್ದಾಳೆ. ಪತಿ, ಪತ್ನಿಯರ ಜಗಳದಲ್ಲಿ ವಿನಾಕಾರಣ ನನ್ನನ್ನುಎಳೆದುತರಲಾಗುತ್ತಿದೆ. ದೂರು ಪತ್ರಕ್ಕೆ ನನ್ನಿಂದ ಬಲವಂತವಾಗಿ ಹೆಬ್ಬೆಟ್ಟು ಒತ್ತಿಸಿಕೊಳ್ಳಲಾಗಿದೆ. ಸಹಿ ಮಾಡದಷ್ಟು ನಾನು ಅನಕ್ಷರಸ್ಥೆಯೇ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರಾಧ್ಯಾಪಕರ ಪತ್ನಿಯು, ತನ್ನ ಪತಿಯ ಬಗ್ಗೆ ಈವರೆಗೆ ದೂರು ದಾಖಲಿಸಿಲ್ಲ. ಯುವತಿ ದೂರು ಕೊಡಲು ನಿರಾಕರಿಸುತ್ತಿದ್ದಾಳೆ ಎಂದು ಹೇಳಿದ್ದಾರೆ. ಹೀಗಾಗಿ ರಾತ್ರಿ ೧೦ ಗಂಟೆಯಾದರೂ ಕೂಡ ಪ್ರಕರಣದ ಬಗ್ಗೆ ಸ್ಪಷ್ಟತೆ ಕಂಡುಬಂದಿರಲಿಲ್ಲ.
ಪ್ರಾಧ್ಯಾಪಕರ ಮೇಲೆ ಅತ್ಯಾಚಾರ ಆರೋಪ ಹೊರಿಸಿರುವ ಕುರಿತು ಠಾಣೆಗೆ ಕೆಲವರು ಬಂದಿದ್ದಾರೆ. ಈವರೆಗೂ ಯಾವುದೇ ದೂರು ಬಂದಿಲ್ಲ. ದೂರು ಬಂದರೆ ಎಫ್‌ಐಆರ್ ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement