ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೋವಿಡ್‌ ವೈರಸ್ ಇಟಾ ರೂಪಾಂತರಿ ಪತ್ತೆ..!

ಮಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಅಬ್ಬರದ ಭೀತಿ ಎದುರಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ಗಡಿ ಭಾಗದ ಎಂಟು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ವಿಸ್ತರಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ.
ಇದರ ನಡುವೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಟಾ ಹೆಸರಿನ ಹೊಸ ತಳಿಯ ವೈರಾಣು ಪತ್ತೆಯಾಗಿದೆ. ಕೋವಿಡ್ ಪಾಸಿಟಿವ್ ಬಂದಿದ್ದ ವ್ಯಕ್ತಿಯ ಸ್ವ್ಯಾಬ್‌ ಅನ್ನು ಜಿನೋಮಿಕ್ ಸಿಕ್ವೆನ್ಸ್ ಪರೀಕ್ಷೆಗೆ ಒಳಪಡಿಸಿದಾಗ ಇದು ಇಟಾ ತಳಿಯ ವೈರಸ್‌ ಎಂದು ಖಚಿತವಾಗಿದೆ. ವಿದೇಶದಿಂದ ಬಂದಿದ್ದ ಈ ವ್ಯಕ್ತಿಯಲ್ಲಿ ITA -B.1525 ಎಂಬ ವೈರಸ್ ಪತ್ತೆಯಾಗಿದೆ.
ನಾಲ್ಕು ತಿಂಗಳ ಹಿಂದೆ ಕತಾರ್‌ನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯಲ್ಲಿ ಈ ಇಟಾ ರೂಪಾಂತರಿ ವೈರಸ್ ಇತ್ತು ಎಂದು ಇದೀಗ ಅಧ್ಯಯನ ಸಂದರ್ಭದಲ್ಲಿ ಗೊತ್ತಾಗಿದೆ. ಅವರನ್ನು ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ ವರದಿ ಪಾಸಿಟಿವ್ ಬಂದಿತ್ತು. ಆ ಬಳಿಕ ಸ್ವ್ಯಾಬ್‌ನ್ನು ಜಿನೋಮಿಕ್ ಸ್ಟಡಿಗಾಗಿ ಬೆಂಗಳೂರು ವೈರಲಾಜಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿತ್ತು. ಈಗ ಲ್ಯಾಬ್ ವರದಿ ಬಂದಿದ್ದು, ಅದರಲ್ಲಿ ಇಟಾ ವೈರಸ್ ಇರುವುದು ಪತ್ತೆಯಾಗಿದೆ.
ಪಾಸಿಟಿವ್ ಬಂದಿದ್ದ ವ್ಯಕ್ತಿಯ ಆರೋಗ್ಯದಲ್ಲೂ ಏರುಪೇರು ಆಗಿರಲಿಲ್ಲ. ಹೀಗಾಗಿ ಈ ರೂಪಾಂತರಿ ತಳಿಯ ಬಗ್ಗೆ ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ. ಇಟಾ ವೈರಸ್ ಇದ್ದ ವ್ಯಕ್ತಿ ಸದ್ಯ ಆರೋಗ್ಯವಾಗಿದ್ದು ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಪ್ರದೇಶಗಳೂ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement