ಸಿಎಂ ಬೊಮ್ಮಾಯಿಗೆ ಈಗ ವಲಸಿಗ, ಅತೃಪ್ತರ ಕಾಟ

posted in: ರಾಜ್ಯ | 0

ಬೆಂಗಳೂರು: ಯಡಿಯೂರಪ್ಪ ರಾಜೀನಾಮೆ ಬಳಿಕ ಸಿಎಂ ಆಗಿರುವ ಬಸವರಾಜ ಬೊಮ್ಮಯಿ ಅವರಿಗೆ ಮತ್ತೆ ವಲಸಿಗ ಅತೃಪ್ತರ ಕಾಟ ಆರಂಭವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಲಸಿಗ ಅತೃಪ್ತರು ನಿನ್ನೆ ತಡರಾತ್ರಿ ಸಭೆ ನಡೆಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರ ನೇತೃತ್ವವನ್ನು ಮತ್ತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಹಿಸಿಕೊಂಡಿರುವುದು ಸಿಎಂ ಬೊಮ್ಮಾಯಿಗೆ ಸಂಕಷ್ಟ ತರಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ವಲಸಿಗ ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ್‌ಕುಮಠಳ್ಳಿ, ವಿಧಾನ ಪರಿಷತ್ ಸದಸ್ಯರಾಜುಗೌಡ, ಅರವಿಂದ ಬೆಲ್ಲದ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ನಿನ್ನೆ ತಡ ರಾತ್ರಿ ಸಭೆ ನಡೆಸಿದ್ದು, ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿರುವ ತಮ್ಮನ್ನು ಸಚಿವ ಸಂಪುಟದಿಂದ ಹೊರಗಿಟ್ಟು ತಮಗೆ ಅನ್ಯಾಯ ಮಾಡಲಾಗಿದೆ ಎಂದು ವಲಸೆ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಬಿಎಸ್‌ವೈ ಸಂಪುಟದಲ್ಲಿದ್ದ ಶ್ರೀಮಂತ ಪಾಟೀಲ ಹಾಗೂ ಆರ್. ಶಂಕರ್ ಮತ್ತು ಮಹೇಶ್ ಕುಮಠಳ್ಳಿಗೆ ಸಚಿವ ಸ್ಥಾನ ನೀಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ರಾಜೀನಾಮೆ ಇಂಗಿತ: ಬಿಜೆಪಿ ನಾಯಕರು ನಡು ನೀರಿನಲ್ಲಿಕೈ ಬಿಟ್ಟಿದ್ದು, ನೀವೇ ನ್ಯಾಯ ಕೊಡಿಸಿ ಎಂದು ಜಾರಕಿಹೊಳಿ ಅವರನ್ನು ಶ್ರೀಮಂತ ಪಾಟೀಲ, ಕುಮಠಳ್ಳಿ ಆಗ್ರಹಿಸಿದ್ದಾರೆ. ಈಗ ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳಲ್ಲಿ ತಮಗೆ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆರ್. ಶಂಕರ್ ಕೂಡ ಬಿಜೆಪಿ ನಾಯಕರ ನಡೆಯ ಬಗ್ಗೆ ಬೇಸರಗೊಂಡಿದ್ದಾರೆ ಎನ್ನಲಾಗಿದ್ದು, ತಮ್ಮಿಂದ ಬಿಜೆಪಿಗೆ ಅಧಿಕಾರ ಬಂದಿದ್ದರೂ, ತಮ್ಮನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಿರುವುದು ಯಾವ ನ್ಯಾಯ? ಈ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸುವಂತೆ ರಮೇಶ್ ಜಾರಕಿಹೊಳಿಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನ ಸಿಗದೇ ವಂಚಿತರಾಗಿರುವ ಮೂಲ ಬಿಜೆಪಿ ಶಾಸಕರಾಗಿರುವ ಅರವಿಂದ ಬೆಲ್ಲದ ಹಾಗೂ ರಾಜುಗೌಡ ಸಭೆಯಲ್ಲಿ ಪಾಲ್ಗೊಂಡು ಅಸಮಾಧಾನ ಹೊರ ಹಾಕಿದ್ದಾರೆ   ಎನ್ನಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅತೃಪ್ತ ಶಾಸಕರು ಸಭೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು ಚರ್ಚಿಸಿ ತೀರ್ಮಾನ ಮಾಡೋಣ ಎಂದು ಅತೃಪ್ತರಿಗೆ ಮಾತುಕತೆಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement