ತಿರುವನಂತಪುರಂ: ಭಾರತದಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ವರದಿಯಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲಸಿಕೆ ಪೂರೈಕೆ ವೇಗ ಹೆಚ್ಚಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೇಳಿದ್ದಕ್ಕಿಂತ ಶೇ.60ರಷ್ಟು ಹೆಚ್ಚುವರಿ ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರ ಕೇರಳ ಹೈಕೋರ್ಟಿಗೆ ತಿಳಿಸಿದೆ.
ದರ ಜಾಗತೀಕರಣ ಮತ್ತು ರಾಷ್ಟ್ರೀಯ ಕೊವಿಡ್-19 ಲಸಿಕೆ ಅಭಿಯಾನ ಪ್ರಶ್ನಿಸಿ ಕೆ. ಪಿ. ಅರವಿಂದನ್ ಮತ್ತು ಡಾ. ಪ್ರವೀಣಾ ಜಿ. ಪೈ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಲಸಿಕೆ ಪೂರೈಕೆ ಬಗ್ಗೆ ಉತ್ತರ ನೀಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸೂಚನೆ ನೀಡಿತ್ತು.
ರಾಷ್ಟ್ರೀಯ ಕೊವಿಡ್-19 ಲಸಿಕೆ ಯೋಜನೆ ಅಡಿಯಲ್ಲಿ ಕೇರಳದಲ್ಲಿ ಅಗತ್ಯಕ್ಕೆ ತಕ್ಕಂತೆ ಲಸಿಕೆ ಪೂರೈಸಲಾಗಿದೆ. ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಯಾ ಜನಸಂಖ್ಯೆ, ಲಸಿಕೆ ವಿತರಣೆ ವೇಗ ಮತ್ತು ಲಸಿಕೆ ವ್ಯರ್ಥಗೊಳಿಸಿರುವುದರ ಆಧಾರದ ಮೇಲೆ ಕೊರೊನಾ ವೈರಸ್ ಲಸಿಕೆ ಪೂರೈಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತನ್ನ ಉತ್ತರದಲ್ಲಿ ಹೈಕೋರ್ಟಿಗೆ ತಿಳಿಸಿದೆ.
ಜುಲೈ 2021ರ ಲಸಿಕೆ ಹಂಚಿಕೆ ಪ್ರಕಾರ, ರಾಜ್ಯಕ್ಕೆ 39,02,580 ಡೋಸ್ ಲಸಿಕೆ ನೀಡುವಂತೆ ಪ್ರಸ್ತಾಪಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರವಾಗಿ 61,36,720 ಡೋಸ್ ಲಸಿಕೆಯನ್ನು ರಾಜ್ಯಕ್ಕೆ ರವಾನಿಸಲಾಗಿದೆ. ಅಂದರೆ ಕೇರಳ ಸರ್ಕಾರವು ಪ್ರಸ್ತಾಪಿಸಿದ್ದಕ್ಕಿಂತಲೂ ಶೇ.60ರಷ್ಟು ಹೆಚ್ಚುವರಿ ಲಸಿಕೆ ಪೂರೈಸಲಾಗಿದೆ ಎಂದು ಅಸಿಸ್ಟೆಂಟ್ ಸಾಲಿಸೆಟರ್ ಜನರಲ್ ಪಿ ವಿಜಯಕುಮಾರ್ ಹೇಳಿದ್ದಾರೆ.
ರಾಜ್ಯಗಳಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣ ಮತ್ತು ವೇಗ ಗಮನದಲ್ಲಿ ಇಟ್ಟುಕೊಂಡು ಹೆಚ್ಚುವರಿ ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ಪೂರೈಕೆ ಮಾಡಲಾಗುತ್ತಿದೆ. ಕೇರಳದಲ್ಲಿ ಅರ್ಹ ಫಲಾನುಭವಿಗಳ ಪೈಕಿ ಶೇ.55ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಅರ್ಹ ಫಲಾನುಭವಿಗಳ ಪೈಕಿ ಶೇ.42 ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಅರ್ಹ ಫಲಾನುಭವಿಗಳ ಪೈಕಿ ಶೇ.12ರಷ್ಟು ಜನರಿಗೆ ಎರಡು ಲಸಿಕೆ ವಿತರಿಸಿದ್ದರೆ, ಕೇರಳವೊಂದರಲ್ಲೇ ಶೇ.22ರಷ್ಟು ಮಂದಿಗೆ ಎರಡು ಲಸಿಕೆ ನೀಡಲಾಗಿದೆ. ಆದ್ದರಿಂದ ರಾಷ್ಟ್ರೀಯ ಕೊವಿಡ್-19 ಲಸಿಕೆ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು ಪ್ರಸ್ತಾಪಿಸಿದ್ದಕ್ಕಿಂತ ಹೆಚ್ಚುವರಿ ಲಸಿಕೆಯನ್ನು ಪೂರೈಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ