ಕಾರ್ಮಿಕರಿಗೆ ಸಹಾಯಧನ ಹೆಚ್ಚಳ, ಕಾರ್ಮಿಕರು ಮೃತಪಟ್ಟರೆ 5 ಲಕ್ಷ ಪರಿಹಾರ ನೀಡುವ ಮಸೂದೆ ಮಂಡನೆ: ಸಚಿವ ಹೆಬ್ಬಾರ

ಬೆಂಗಳೂರು: ಕಾರ್ಮಿಕರ ಕಲ್ಯಾಣಕ್ಕಾಗಿ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲೇ ನೂತನ ಕಾರ್ಮಿಕ ಕಾಯ್ದೆಯನ್ನು ಮಂಡಿಸಲಾಗುತ್ತಿದೆ. ಹಾಗೆಯೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ನೀಡಲಾಗುತ್ತಿರುವ ವಿವಿಧ ಸಹಾಯಧನವನ್ನು ದುಪ್ಪಟ್ಟು ಮಾಡುವ ತೀರ್ಮಾನ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಹೇಳಿದರು.
ವಿಧಾನಸೌಧದಲ್ಲಿ ಇಂದು (ಶುಕ್ರವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಾಲಕ್ಕೆ ನಾನೇ ಚಾಲಕನಾಗಿ ಕೆಲಸ ಮಾಡಿದ್ದೆ. ಕಾರ್ಮಿಕರ ಕಷ್ಟಗಳು ಏನೆಂಬುದು ನನಗೆ ಗೊತ್ತು. ಹೀಗಾಗಿ ಆಟೋ ರಿಕ್ಷಾ, ಬಸ್ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಕಾರ್ಮಿಕರು ಸರ್ಕಾರದಿಂದ ಮೃತಪಟ್ಟರೆ ಐದು ಲಕ್ಷ ಪರಿಹಾರ ಕೊಡುವ ಹೊಸ ಮಸೂದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.
ಕಾರ್ಮಿಕರು ಮೃತರಾದರೆ ೫ ಲಕ್ಷ ಪರಿಹಾರ ಸೇರಿದಂತೆ ಕಾರ್ಮಿಕರಿಗೆ ಹಲವು ಸೌಲಭ್ಯ-ಸವಲತ್ತುಗಳನ್ನು ಒದಗಿಸುವ ಸಲುವಾಗಿ ಈ ಕಾಯ್ದೆಯನ್ನು ಜಾರಿ ಮಾಡಲಾಗುತ್ತಿದೆ ಎಂದರು.
ಮಾಧ್ಯಮದಲ್ಲಿ ಕೆಲಸ ಮಾಡುವವರನ್ನೂ ಸೇರಿದಂತೆ ಹಲವರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸುವ ಮನವಿಗಳು ಬಂದಿವೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಅಡಲಾಗುವುದು ಎಂದು ಅವರು ಹೇಳಿದರು.
ಕಾರ್ಮಿಕ ಕಾಯ್ದೆಗಳ ಅನುಷ್ಠಾನದ ಮೇಲೆ ನಿಗಾ ಇಡಲು ಹಾಗೂ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಲು ಕಾರ್ಮಿಕ ಇಲಾಖೆಯಲ್ಲೂ ಜಾಗೃತ ದಳ ರಚನೆ ಮಾಡಲಾಗುವುದು, ವಲಸಿಗ ಕಾರ್ಮಿಕರಿಗಾಗಿಯೇ ಪ್ರತಿ ಜಿಲ್ಲೆಯಲ್ಲೂ ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗುವುದು ಎಂದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಉತ್ತರಿಸಿದ ಅವರು, ಇಂದಿರಾಗಾಂಧಿ ಅವರ ಮೇಲೆ ಮಮತೆಯೂ ಇಲ್ಲ, ದ್ವೇಷವೂ ಇಲ್ಲ, ಹೆಸರು ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನಿಸುತ್ತಾರೆ ಎಂದರು.

ಪ್ರಮುಖ ಸುದ್ದಿ :-   ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement