ನಾಳೆಯಿಂದ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ

ಧಾರವಾಡ: ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆಯನ್ನು ನಾಳೆ (ಆ.16) ಬೆಳಿಗ್ಗೆ ಹೊರಡಿಸಲಾಗುವುದು. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯು ನಾಳೆಯಿಂದ ಆರಂಭವಾಗಲಿದೆ ಎಂದು ಎಂದು ಜಿಲ್ಲಾಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಇಂದು(ಭಾನುವಾರ) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳಿಗೆ ಅಗತ್ಯ ಮಾಹಿತಿ ಹಾಗೂ ಪರವಾನಿಗೆ ನೀಡಲು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಎರಡು ಪ್ರತ್ಯೇಕ ಏಕಗವಾಕ್ಷಿ ಕೇಂದ್ರಗಳನ್ನು ರಚಿಸಲಾಗಿದ್ದು, ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡಗಳಿಗೆ ಚುನಾವಣೆ ನಡೆಯಲಿದ್ದು, ಅವಳಿ ನಗರದ ಒಟ್ಟು 8,11,537 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ ಎಂದು ಹೇಳಿದರು.
. ಆಗಸ್ಟ್ 23 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 24 ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತದೆ. ಆಗಸ್ಟ್ 26 ರಂದು ನಾಮಪತ್ರ ಹಿಂಪಡೆಯಬಹುದು. ಸೆಪ್ಟಂಬರ್ 3 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದೆ . ಮರು ಮತದಾನ ಅವಶ್ಯವಿದ್ದಲ್ಲಿ ಸೆಪ್ಟಂಬರ್ 5 ರಂದು ಮತದಾನ ನಡೆಸಲಾಗುತ್ತದೆ. ಸೆಪ್ಟಂಬರ್ 6 ರಂದು ಮತಗಳ ಎಣಿಕೆ ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ ಎಂದು ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಹೊರಡಿಸಲಾಗಿದೆ. 16 ಚುನಾವಣಾಧಿಕಾರಿ ಹಾಗೂ 16 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ವಾರ್ಡಗಳಿಗೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕರಿಸುವ ಸ್ಥಳ  :
ವಾರ್ಡ್ 01 ರಿಂದ 05 ರ ವರೆಗೆ ಮಹಾನಗರ ಪಾಲಿಕೆ ಕಚೇರಿ ಧಾರವಾಡ ಸಾಮಾನ್ಯ ಆಡಳಿತ ವಿಭಾಗ ಹೊಸ ಕಟ್ಟಡದ ಪಕ್ಕದ ಕೋಣೆ, ವಾರ್ಡ್ 6 ರಿಂದ 10 ರ ವರೆಗೆ ಮಹಾನಗರ ಪಾಲಿಕೆ ಕಚೇರಿ ಧಾರವಾಡ ಸಾಮಾನ್ಯ ಆಡಳಿತ ವಿಭಾಗ ಹಳೇ ಕಟ್ಟಡದಲ್ಲಿರುವ ಕೋಣೆ, ವಾರ್ಡ್ 11 ರಿಂದ 15 ರ ವರೆಗೆ ಧಾರವಾಡ ಮಹಾನಗರ ಪಾಲಿಕೆಯಲ್ಲಿರುವ 74 ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿ, ವಾರ್ಡ್ 16 ರಿಂದ 20 ರ ವರೆಗೆ ಧಾರವಾಡ ಮಹಾನಗರ ಪಾಲಿಕೆಯಲ್ಲಿರುವ ಮಹಾಪೌರರ ಕಚೇರಿ, ವಾರ್ಡ್ 21 ರಿಂದ 25 ರ ವರೆಗೆ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಜಲಮಂಡಳಿ ಕಚೇರಿ ಹಳೇ ಕಟ್ಟಡ ವ.ಕ.ನಂ.3, ಮೇಲಿನ ಅಂತಸ್ತು, ವಾರ್ಡ್ 26 ರಿಂದ 30 ರ ವರೆಗೆ ನವನಗರ ಅಂಬೇಡ್ಕರ ಭವನ, ವಾರ್ಡ್ 31 ರಿಂದ 35 ರ ವರೆಗೆ ಹುಬ್ಬಳ್ಳಿ ಈಜುಗೋಳ ಕಟ್ಟಡ ವಲಯ ಕಚೇರಿ ನಂ.5 ಮೇಲ್ಮಹಡಿ, ವಾರ್ಡ್ 36 ರಿಂದ 40 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ನಗರ ಯೋಜನೆ ಸ್ಥಾಯಿ ಸಮಿತಿ ಕಾರ್ಯಾಲಯ.
ವಾರ್ಡ್ 41 ರಿಂದ 46 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಕಾರ್ಯಾಲಯ, ವಾರ್ಡ್ 47 ರಿಂದ 51 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ತೇರಿಗೆ ನಿರ್ಧರಣೆ ಹಣಕಾಸು ಸ್ಥಾಯಿ ಸಮಿತಿ ಕಾರ್ಯಾಲಯ, ವಾರ್ಡ್ 52 ರಿಂದ 56 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ಲೆಕ್ಕ ಸ್ಥಾಯಿ ಸಮಿತಿ ಕಾರ್ಯಾಲಯ, ವಾರ್ಡ್ 57 ರಿಂದ 61 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ಉಪಮಹಾಪರರ ಕಾರ್ಯಾಲಯ, ವಾರ್ಡ್ 62 ರಿಂದ 66 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ವಿರೋಧ ಪಕ್ಷದ ನಾಯಕರ ಕಾರ್ಯಾಲಯ, ವಾರ್ಡ್ 67 ರಿಂದ 71 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿಯ ಹಿಂಭಾಗದ ಪಿ.ಆರ್.ಒ. ಕಚೇರಿ, ವಾರ್ಡ್ 72 ರಿಂದ 77 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ನೌಕರರ ಪತ್ತಿನ ಸಂಘದ ಕಚೇರಿ, ವಾರ್ಡ್ 78 ರಿಂದ 82 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿರುವ ಸಹಾಯಕ ನಿರ್ದೇಶಕರು, ನಗರ ಯೋಜನೆ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆಯು ಆಗಸ್ಟ್ 16 ರಿಂದ ಪ್ರಾರಂಭಗೊಂಡು ಸೆಪ್ಟಂಬರ್ 6 ರ ವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗ ನೀಡಿದ ನಿರ್ದೇಶನಗಳಂತೆ ಮಾದರಿ ನೀತಿ ಸಂಹಿತೆಯು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಎಲ್ಲ ಪಕ್ಷದವರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಮತದಾರರ ಪಟ್ಟಿ:
ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಜುಲೈ 9 ರಂದು ಅಂತಿಮ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 403497 ಪುರುಷ ಹಾಗೂ 407954 ಮಹಿಳಾ ಹಾಗೂ 86 ಇತರೆ ಸೇರಿ ಒಟ್ಟು 811537 ಮತದಾರರು ಇದ್ದಾರೆ. ಮತ್ತು ಆಗಸ್ಟ್ 13ರ ವರೆಗೆ ನಮೂನೆ 6ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿರುವ ಮತದಾರರ ಹೆಸರು ಸೇರಿಸಿ ಪೂರಕ ಮತದಾರರ ಪಟ್ಟಿಯನ್ನು ತಯಾರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 82 ವಾರ್ಡಗಳಿಗೆ ಒಟ್ಟು 837 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಾಲಿಕೆ ಸಾರ್ವತ್ರಿಕ ಚುನಾವಣೆ-2021ರ ಚುನಾವಣೆಗೆ ಇವಿಎಂ ಬಳಸಲಾಗುತ್ತದೆ ಎಂದು ಅವರು ತಿಳಿಸಿದರು.
82 ವಾರ್ಡಗಳ ಚುನಾವಣೆಯ ಮತ ಏಣಿಕೆಯನ್ನು ಸೆಪ್ಟೆಂಬರ್ 6ರಂದು ಬೆಳಿಗ್ಗೆ 8 ಗಂಟೆಯಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ.ಬಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ,ಐಎಎಸ್ ಪ್ರೊಬೆಷನರಿ ಅಧಿಕಾರಿ ಮಾಧವ ಗಿತ್ತೆ, ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement