ನವದೆಹಲಿ: ದುಬೈನಲ್ಲಿ ನಡೆಯಲಿರುವ ಈ ಬಾರಿಯ ಟಿ-20 ವಿಶ್ವಕಪ್ನ ವೇಳಾಪಟ್ಟಿಯನ್ನು ಐಸಿಸಿ ಇಂದು (ಮಂಗಳವಾರ) ಬಿಡುಗಡೆ ಮಾಡಿದೆ.
ಅಕ್ಟೋಬರ್ 17ರಂದು ಪ್ರಾರಂಭವಾಗಲಿರುವ ಈ ವಿಶ್ವಕಪ್ ಕ್ರಿಕೆಟ್ ಟೂರ್ನಿ ನವೆಂಬರ್ 14ಕ್ಕೆ ಮುಕ್ತಾಯವಾಗಲಿದೆ. ಒಟ್ಟು 16 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಎರಡು ಹಂತದಲ್ಲಿ ಪಂದ್ಯಾವಳಿ ನಡೆಯಲಿದೆ.
ಅರ್ಹತಾ ಹಂತದ ಪಂದ್ಯಗಳು ಅಕ್ಟೋಬರ್ 17ರಿಂದ ಅಕ್ಟೋಬರ್ 22ರ ವರೆಗೆ ನಡೆಯಲಿದ್ದು, ನಂತರ ಸೂಪರ್ 12 ಹಂತ ನಡೆಯಲಿದೆ. ಟಿ20 ಕ್ರಿಕೆಟ್ನಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 8 ಸ್ಥಾನದಲ್ಲಿರುವ ತಂಡಗಳು ನೇರವಾಗಿ ಸೂಪರ್ 12 ಹಂತ ಪ್ರವೇಶ ಪಡೆಯುತ್ತವೆ. ಈ 12 ತಂಡಗಳ ಜೊತೆಗೆ ಅರ್ಹತಾ ಹಂತದಿಂದ ನಾಲ್ಕು ತಂಡಗಳು ಕ್ವಾಲಿಫೈ ಆಗಲಿವೆ. ಟೆಸ್ಟ್ ಆಡುವ ತಂಡಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಅರ್ಹತಾ ಹಂತದಲ್ಲಿ ಆಡುತ್ತಿವೆ. ಎ ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್ ಮತ್ತು ನಮೀಬಿಯಾ ತಂಡಗಳಿವೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಓಮನ್ ತಂಡಗಳಿವೆ.
ಸೂಪರ್ 12 ಹಂತದ ಒಂದನೇ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಅರ್ಹತಾ ಹಂತದಿಂದ ಬಂದ 2 ತಂಡಗಳು ಇರಲಿವೆ. ಎರಡನೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಆಫ್ಘಾನಿಸ್ತಾನ ಹಾಗೂ ಅರ್ಹತಾ ಹಂತದಿಂದ ಬಂದ ಎರಡು ತಂಡಗಳು ಇರಲಿವೆ. ಅರ್ಹತಾ ಹಂತದಲ್ಲಿರುವ ಗ್ರೂಪ್ ಎನಲ್ಲಿ ಮೊದಲ ಸ್ಥಾನ ಪಡೆದ ತಂಡ ಹಾಗೂ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡ ಸೂಪರ್12 ಹಂತದಲ್ಲಿ ಒಂದನೇ ಗುಂಪಿನಲ್ಲಿ ಆಡಲಿವೆ. ಹಾಗೆಯೇ, ಅರ್ಹತಾ ಹಂತದಲ್ಲಿ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡ ಹಾಗೂ ಬಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡಗಳು ಸೂಪರ್ 12 ಹಂತದಲ್ಲಿ ಎರಡನೇ ಗುಂಪಿನಲ್ಲಿ ಆಡಲಿವೆ.
ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರಂದು ಪ್ರಾರಂಭವಾಗುತ್ತವೆ. ಆಸ್ಟ್ರೇಲಿಯಾ ಹಾಗೂ ಸೌಥ್ ಆಫ್ರಿಕಾ ನಡುವೆ ಮೊದಲ ಸೂಪರ್ 12 ಹಂತದ ಪಂದ್ಯ ನಡೆಯಲಿದೆ. ಎರಡನೇ ಗುಂಪಿನಲ್ಲಿನ ಮೊದಲ ಪಂದ್ಯ ಅಕ್ಟೋಬರ್ 24ರಂದು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯಲಿದೆ.
ಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತದ ಪಂದ್ಯಗಳು:
ಭಾರತ – ಪಾಕಿಸ್ತಾನ – ಅ. 24
ಭಾರತ-ನ್ಯೂಜಿಲೆಂಡ್ – ಅ. 31
ಭಾರತ -ಆಫ್ಘನಿಸ್ತಾನ – ನ. 4
ಭಾರತ- ಬಿ1 – ನ. 5
ಭಾರತ-ಎ2 – ನ. 8
ಸೂಪರ್12 ಹಂತದಲ್ಲಿ ಪ್ರತೀ ಗುಂಪಿನಿಂದ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆ. ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ