ಹಲವು ವರ್ಷಗಳಿಂದ ಒಂದೆಕಡೇ ಇದ್ದ ವಿಧಾನ ಪರಿಷತ್​ನ 30 ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೇರೂರಿದ್ದ ಕರ್ನಾಟಕ ವಿಧಾನ ಪರಿಷತ್​ನ 30 ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆದೇಶಿಸಿದ್ದಾರೆ.
ಈ ಮೂಲಕ ಸಚಿವಾಲಯದ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಆಯಕಟ್ಟಿನ ಸ್ಥಳಗಳಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತ ತಮ್ಮದೇ ಹಿಡಿತ ಹಾಗೂ ಪ್ರಭುತ್ವ ಸಾಧಿಸಿದ್ದ ಹಲವರನ್ನು ಬೇರೆಡೆಗೆ ವರ್ಗಾಯಿಸಿ ವಿಧಾನ ಪರಿಷತ್ ಕಾರ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಗೆ ಮುಂದಾಗಿದ್ದಾರೆ.
ಈ ಕುರಿತು ನಿನ್ನೆಯಷ್ಟೇ ಅಧಿಸೂಚನೆ ಹೊರಡಿಸಿದ್ದು ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಶಾಖಾಧಿಕಾರಿಗಳು, ಹಿರಿಯ ಸಹಾಯಕರು, ಸಹಾಯಕರು ಮತ್ತು ಕಿರಿಯ ಸಹಾಯಕರನ್ನೊಳಗೊಂಡ 30 ಜನರನ್ನು ಬೇರೆ ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗಿದೆ. ಸಿಬ್ಬಂದಿಯ ವರ್ಗಾವಣೆ ಕುರಿತು ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅಧಿಕೃತ ಆದೇಶ ಹೊರಡಿಸಿದ್ದಾರೆ
ಪರಿಷತ್ ಸಚಿವಾಲಯದ ಕಾರ್ಯ ನಿರ್ವಹಣೆಯಲ್ಲಿ ವ್ಯಾಪಕ ಬದಲಾವಣೆ ಅವಶ್ಯಕತೆ ಇದೆ ಎನ್ನುವ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತಾದರೂ ಈ ಕುರಿತು ಯಾರೂ ಸಹ ಈ ಪ್ರಮಾಣದಲ್ಲಿ ಕ್ರಮ ಕೈಗೊಂಡಿರಲಿಲ್ಲ. ಹಲವಾರು ಪ್ರಭಾವಿಗಳ ಕೃಪಾಶೀರ್ವಾದ, ಒತ್ತಡ ಮೊದಲಾದ ಕಾರಣಗಳಿಂದ ಹಲವು ಸಿಬ್ಬಂದಿ ಸಚಿವಾಲಯದ ಆಯಕಟ್ಟಿನ ಸ್ಥಳಗಳಲ್ಲಿ ಬಹಳ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಕೆಲ ಸಿಬ್ಬಂದಿಗಳ ಬಗ್ಗೆ ಹಲವು ದೂರುಗಳು ಕೇಳಿ ಬಂದಿದ್ದವು. ಇವೆಲ್ಲವುಗಳನ್ನು ಪರಿಗಣಿಸಿ ಸಭಾಪತಿ ಬಸವರಾಜ ಹೊರಟ್ಟಿ 30 ಜನ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದಾರೆ.
ಚಿಂತಕರ ಚಾವಡಿ ಎನಿಸಿರುವ ಮೇಲ್ಮನೆಯ ಪ್ರಾಮುಖ್ಯತೆ ಹಾಗೂ ಅದರ ಘನತೆ ಹೆಚ್ಚಿಸಲು ಅಗತ್ಯ ಸುಧಾರಣೆಗಳನ್ನು ಕೈಗೊಂಡು ಆಡಳಿತ ಯಂತ್ರ ಚುರುಕುಗೊಳಿಸಲು ವಿನೂತನ ಪ್ರಯತ್ನವನ್ನು ಸದಾ ಮುನ್ನಡೆಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ಪೆನ್ ಡ್ರೈವ್ ಪ್ರಕರಣ : ಡಿಕೆ ಶಿವಕುಮಾರ ವಿರುದ್ಧ ಪೋಸ್ಟರ್‌ ಸಮರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement