ಕಾಬೂಲ್‌ನಿಂದ 85 ಭಾರತೀಯರ ಸುರಕ್ಷಿತ ಸ್ಥಳಾಂತರ

ನವದೆಹಲಿ: ತಾಲಿಬಾನ್ ಉಗ್ರರು ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ ವಶಪಡಿಸಿಕೊಂಡ ನಂತರ ಪ್ರಕ್ಷುಬ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆ ಮುಂದುವರಿದಿದ್ದು, ಮೂರನೇ ಸ್ಥಳಾಂತರದಲ್ಲಿ ಶನಿವಾರ 85 ಜನರನ್ನು ಸ್ವದೇಶಕ್ಕೆ ಕರೆತರಲಾಗಿದೆ.
ಭಾರತೀಯ ವಾಯು ಪಡೆ ವಿಮಾನ (ಐಎಎಫ್ ಸಿ-130) ಕಾಬೂಲ್‌ನಿಂದ ಶನಿವಾರ ಬೆಳಗ್ಗೆ 85 ಭಾರತೀಯರನ್ನು ಹೊತ್ತು ತಜಕೀಸ್ತಾನದ ದುಶಾನ್ಬೆಗೆ ಸ್ಥಳಾಂತರಗೊಳಿಸಿದೆ. ನಂತರ ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯರು ತಾಯ್ನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಡುವೆ ನಿರಂತರ ಪ್ರಯತ್ನದ ಬಳಿಕ ಭಾರತೀಯರನ್ನು ಕಾಬೂಲ್‌ನಿಂದ ತೆರವುಗೊಳಿಸುವ ಹಾದಿ ಸುಗಮವಾಗಿದೆ. ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್, ಉನ್ನತಾಧಿಕಾರಿಗಳು ಮತ್ತು ಪತ್ರಕರ್ತರನ್ನು ಒಳಗೊಂಡ 150 ಜನರನ್ನು ಭಾರತೀಯ ವಾಯುಪಡೆ ವಿಮಾನದಲ್ಲಿ ಭಾರತಕ್ಕೆ ಎರಡು ದಿನಗಳ ಹಿಂದೆ ಸುರಕ್ಷಿತವಾಗಿ ಕರೆತರಲಾಗಿದೆ.ಕಾಬೂಲ್ ಸೇರಿದಂತೆ ವಿವಿಧೆಡೆ ಸಂತ್ರಸ್ತರಾಗಿರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸರ್ಕಾರ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement