ಮಾಜಿ ಸಿಎಂ ಕಲ್ಯಾಣ ಸಿಂಗ್‌ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ನಿನ್ನೆ ನಿಧನರಾದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಅಂತಿಮ ದರ್ಶನ ಪಡೆದರು.
ನಂತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ನಾವು ದೇಶದ ಒಬ್ಬ ಸಮರ್ಥ ನಾಯಕನನ್ನು ಕಳೆದುಕೊಂಡಿದ್ದೇವೆ. ಕಲ್ಯಾಣ್ ಸಿಂಗ್ ಅವರ ಮೌಲ್ಯಗಳು ಮತ್ತು ನಿರ್ಣಯಗಳನ್ನು ನಮ್ಮ ಕೆಲಸಗಳಲ್ಲಿ ಅಳವಡಿಸಿಕೊಂಡು ಅವರಿಗೆ ಪರ್ಯಾಯವಾಗಿ ಸಾಧ್ಯವಾದಷ್ಟು ಬಳಸಿಕೊಳ್ಳಲು ಪ್ರಯತ್ನಿಸೋಣ, ಅವರು ಕಂಡಿದ್ದ ಕನಸುಗಳನ್ನು ನನಸು ಮಾಡಲು ಶ್ರಮಿಸೋಣ ಎಂದು ಮೋದಿ ಹೇಳಿದರು.
ಕಲ್ಯಾಣ್ ಸಿಂಗ್ ಅವರಿಗೆ ದೇವರು ಸ್ವರ್ಗದಲ್ಲಿ ಒಂದು ಸ್ಥಾನವನ್ನು ನೀಡಲಿ, ಅವರ ಕುಟುಂಬಸ್ಥರಿಗೆ ಅವರ ಅಗಲುವಿಕೆಯಿಂದ ಆಗಿರುವ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾನು ರಾಮ ದೇವರನ್ನು ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.
89 ವರ್ಷದ ಕಲ್ಯಾಣ್ ಸಿಂಗ್ ಅವರು ನಿನ್ನೆ ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಬಿಜೆಪಿಯ ಹಿರಿಯ ನಾಯಕರಾಗಿದ್ದ ಕಲ್ಯಾಣ್ ಸಿಂಗ್ ನಿಧನಕ್ಕೆ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಸೇರಿದಂತೆ ಅನೇಕ ನಾಯಕರು ಸಂತಾಪ ಸೂಚಿಸಿದ್ದಾರೆ.
ಕಲ್ಯಾಣ್ ಸಿಂಗ್ ಅವರು ರಾಜಸ್ಥಾನದ ರಾಜ್ಯಪಾಲರಾಗಿಯೂ ಕೆಲಸ ಮಾಡಿದ್ದರು. ಅನಾರೋಗ್ಯದಿಂದಾಗಿ ಜುಲೈ 4ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಮೂರು ದಿನಗಳ ಕಾಲ ಶ್ರದ್ದಾಂಜಲಿ ಘೋಷಿಸಿದೆ. ಕಲ್ಯಾಣ್ ಸಿಂಗ್ ಅವರು ಪತ್ನಿ ರಾಮವತಿ ದೇವಿ, ಪುತ್ರರಾದ ಸಂಸದ ರಾಜ್‍ವೀರ್ ಸಿಂಗ್, ಸಚಿವರಾಗಿರುವ ಮೊಮ್ಮಗ ಸಂದೀಪ್ ಸಿಂಗ್ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement