ಸ್ಯಾಂಡಲ್‌ವುಡ್‌ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ: ಡ್ರಗ್ ಸೇವಿಸಿದ್ದು ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢ

ಬೆಂಗಳೂರು; ಸಿನೆಮಾ ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್​ ಸೇವಿಸಿರುವುದು ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ.
ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಡ್ರಗ್ಸ್ ಸೇವಿಸಿರುವುದು ಎಫ್‌ಎಸ್‌ಎಲ್‌ (FSL) ಪರೀಕ್ಷೆಯಲ್ಲಿ ದೃಡಪಟ್ಟಿದೆ ಎಂದು ಟಿವಿ9 ಕನ್ನಡ.ಕಾಮ್‌ ವರದಿ ಮಾಡಿದೆ.

ಡ್ರಗ್​ ಜಾಲದಲ್ಲಿ ಸಿಲುಕಿ ಸದ್ದು ಮಾಡಿದ್ದ ಚಂದನವನದ ನಟಿಯರಾದ ಸಂಜನಾ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಹೈದರಾಬಾದ್​ನ ಎಫ್​ಎಸ್​ಎಲ್‌ ಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಈಗ ಸಿಸಿಬಿ ಪೊಲೀಸರ ಕೈಸೇರಿದೆ. ರಿಪೋರ್ಟ್​ನಲ್ಲಿ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿದ್ದರು ಎನ್ನುವುದು ದೃಢಪಟ್ಟಿದೆ.
10 ತಿಂಗಳ ಬಳಿಕ ಎಫ್ಎಸ್ಎಲ್ ರಿಪೋರ್ಟ್ ಬಂದಿದ್ದು, ಸದ್ಯ ಜಾಮೀನಿನ ಮೇಲೆ ಹೊರ ಬಂದಿರುವ ರಾಗಿಣಿ, ಸಂಜನಾಗೆ ಮತ್ತೆ ಸಂಕಷ್ಟ ಎದುರಾಗಿದೆ.
ಡ್ರಗ್ಸ್‌ ಕೇಸ್‌ನಲ್ಲಿ ಬಂಧಿತರಾಗಿದ್ದ ಸಂಜನಾ, ರಾಗಿಣಿ ಆರಂಭದಲ್ಲಿ ಹೇರ್‌ ಸ್ಯಾಂಪಲ್ ನೀಡಲು ನಿರಾಕರಿಸಿದ್ದರು. ಹಾಗಾಗಿ, ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ಸಿಸಿಬಿ ಅಧಿಕಾರಿಗಳ ಮನವಿಗೆ ನ್ಯಾಯಾಲಯ ಒಪ್ಪಿಗೆ ಸೂಚಿಸಿದ ಕಾರಣ ತಲೆಗೂದಲ ಸ್ಯಾಂಪಲ್​ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು.
ಈ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು, ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣದಲ್ಲಿ ರಕ್ತ ಮತ್ತು ಮೂತ್ರವನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಅದರಲ್ಲಿ ಡ್ರಗ್ಸ್ ಸೇವಿಸಿ ಒಂದೆರಡು ದಿನದೊಳಗೆ ಪರೀಕ್ಷೆ ಮಾಡಿದರೆ ಮಾತ್ರ ಪಾಸಿಟಿವ್ ಬರುತ್ತದೆ. ಆದ್ದರಿಂದ ಆರೋಪಿಗಳ ಕೂದಲನ್ನು ಕಳೆದ ವರ್ಷ ಹೈದರಾಬಾದ್ ಸಿಎಫ್‌ಎಸ್‌ಎಲ್‌ ಗೆ (CFSL) ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
2020ರ ಸೆಪ್ಟೆಂಬರ್ 14ರಂದು ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ದರು. 140 ದಿನಗಳ ಕಾಲ ಕಸ್ಟಡಿಯಲ್ಲಿದ್ದ ಅವರಿಗೆ, 2021ರ ಜನವರಿ 21ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಜನವರಿ 25ರಂದು ಅವರು ಜೈಲಿಂದ ಬಿಡುಗಡೆಯಾಗಿದ್ದರು.
2020ರ ಸೆಪ್ಟೆಂಬರ್ 16ರಂದು ಡ್ರಗ್ಸ್‌ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಸಂಜನಾ ಗಲ್ರಾನಿ ಡಿಸೆಂಬರ್ 11 2020ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. 56 ದಿನಗಳ ಕಾಲ ಜೈಲಿನಲ್ಲಿ ಇದ್ದ ಸಂಜನಾ ಗಲ್ರಾನಿ, ಗಂಭೀರ ಅನಾರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಷರತ್ತುಬದ್ದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಪ್ರಮುಖ ಸುದ್ದಿ :-   ನಾಳೆ (ಮೇ 9) ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಪ್ರಕಟ ; ಫಲಿತಾಂಶ ಎಲ್ಲಿ ನೋಡುವುದು..? ಇಲ್ಲಿದೆ ಮಾಹಿತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement