ಮಂತ್ರಾಲಯದಲ್ಲಿ ರಾಯರ ಆರಾಧನೆ, ಮಹಾರಥೋತ್ಸವಕ್ಕೆ ತೆರೆ: ಮಠಕ್ಕೆ 2 ಚಿನ್ನದ ಪಾತ್ರೆ ಸಮರ್ಪಣೆ; ಇವುಗಳ ಮೌಲ್ಯ…?

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗೆ (Mantralaya Raghavendra Swamy) ಭಕ್ತರು ನೀಡಿರುವ ಚಿನ್ನದಲ್ಲಿ ಎರಡು ಚಿನ್ನದ ಪಾತ್ರೆಗಳನ್ನು ಮಾಡಿಸಲಾಗಿದೆ.
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಅಂಗವಾಗಿ ಬುಧವಾರ ಮಹಾರಥೋತ್ಸವ ಸಂಭ್ರಮದಿಂದ ನಡೆದಿದೆ. ಮಂಗಳವಾರ ನಡೆದ ಮಧ್ಯಾರಾಧನೆ ವೇಳೆ ರಾಯರ ಬೃಂದಾವನಕ್ಕೆ ಎರಡು ಚಿನ್ನದ ಪಾತ್ರೆಗಳನ್ನು (Gold Pot) ಸಮರ್ಪಣೆ ಮಾಡಲಾಗಿದೆ. ಈ ಎರಡು ಚಿನ್ನದ ಪಾತ್ರೆಗಳ ಮೌಲ್ಯ ಬರೋಬ್ಬರಿ 20 ಕೋಟಿ ರೂಪಾಯಿ ಎಂದು ತಿಳಿಸಲಾಗಿದೆ.

350ನೇ ವರ್ಷದ ಆರಾಧನೆ ಅಂಗವಾಗಿ ಭಕ್ತರು ಕೊಡಮಾಡಿದ ದೇಣಿಗೆಯಿಂದ ವಜ್ರದ ಹಾರವನ್ನು ರಾಯರಿಗೆ ಸಮರ್ಪಿಸಲಾಗಿದೆ.ಆರಾಧನೆ ಮೂಲಕ ಜಗತ್ತನ್ನು ಕವಿದಿರುವ ಕೊರೊನಾ ಉಪದ್ರವ ಕಳೆದು ಶಾಂತಿ ನೆಮ್ಮದಿ ನೆಲೆಸಲಿ ಅಂತ ಮಂತ್ರಾಲಯ ಶ್ರೀಗಳು ಹಾರೈಸಿದರು
ರಾಘವೇಂದ್ರ ಮಠಕ್ಕೆ ದಾನಿಗಳು ನೀಡಿದ ಚಿನ್ನದಿಂದ ತಯಾರಿಸಲಾಗಿರುವ ಚಿನ್ನದ ಪಾತ್ರೆಗಳನ್ನು ಮಂತ್ರಾಲಯದ ಮಠಾಧೀಶ ಶ್ರೀ ಸುಬುಧೇಂದ್ರ ತೀರ್ಥರು ರಾಯರಿಗೆ ಸಮರ್ಪಣೆ ಮಾಡಿದ್ದಾರೆ. ಅಂದಾಜು 20 ಕೋಟಿ ರೂ. ಮೌಲ್ಯದ ಎರಡು ಚಿನ್ನದ ಪಾತ್ರೆಗಳನ್ನು ಪಂಚಾಮೃತ ಅಭಿಷೇಕಕ್ಕೆ ಬಳಸಲು ಶ್ರೀಗಳು ತೀರ್ಮಾನಿಸಿದ್ದಾರೆ. ಇದರ ಬಗ್ಗೆ ಬುಧವಾರದ ಅನುಗ್ರಹ ಸಂದೇಶದಲ್ಲಿಯೂ ಶ್ರೀಗಳು ಮಾಹಿತಿ ನೀಡಿದ್ದಾರೆ.
ತುಂಗಭದ್ರಾ ತೀರದ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ಈ ಹಿನ್ನೆಲೆ ರಾಯರ ಮಠದಲ್ಲಿ ದಿನಕ್ಕೊಂದು ವಿಶೇಷ ಪೂಜೆ ನಡೆಯುತ್ತಿವೆ. ಬುಧವಾರ ಮಹಾರಥೋತ್ಸವ ನೆರವೇರಿತು. ಆಗಸ್ಟ್‌ 21 ರಿಂದ ಪ್ರಾರಂಭವಾದ 350ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಸಪ್ತರಾತ್ರೋತ್ಸವ ಆಗಸ್ಟ್‌ 27ರ ವರೆಗೆ ನಡೆಯಲಿದೆ.
ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಬುಧವಾರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಉತ್ಸವ ಮೂರ್ತಿ ಪ್ರಹ್ಲಾದ ರಾಜರ ಮೆರವಣಿಗೆಯು ಗುರುಕುಲದಿಂದ ಶ್ರೀ ಮಠಕ್ಕೆ ಆಗಮಿಸಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ರಥೋತ್ಸವ ನಡೆಯಿತು. ರಥೋತ್ಸವ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಸುರಿಸಲಾಯಿತು.
ಮಂತ್ರಾಲಯಕ್ಕೆ ಭೇಟಿ ನೀಡುವ ಎಲ್ಲರೂ ತಮ್ಮೂರಿಗೆ ವಾಪಸ್ಸಾಗುವಾಗ ಪರಿಮಳ ಪ್ರಸಾದ ಕೊಂಡೊಯ್ಯುವುದು ರೂಢಿ. ಪ್ರಸಕ್ತ ಆರಾಧನೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಭಕ್ತರು ಮಧ್ಯಾರಾಧನೆಗೆ ಆಗಮಿಸಿದ್ದು, ಪರಿಮಳ ಪ್ರಸಾದಕ್ಕೆ ಭರ್ಜರಿ ಬೇಡಿಕೆ ಕಂಡುಬಂತು. ಪರಿಮಳ ಪ್ರಸಾದದ ತಯಾರಿಯ ವೇಗ ಹೆಚ್ಚಿಸುವಂತಾಯಿತು. ಸಾಮಾನ್ಯ ದಿನಗಳಲ್ಲಿ 2 ರಿಂದ 3 ಸಾವಿರ ಪ್ಯಾಕೆಟ್‌ಗಳು ಮಾರಾಟವಾಗುತ್ತಿದ್ದವು. ಮಂಗಳವಾರದ ಮಧ್ಯಾರಾಧನೆಯ ಸಂದರ್ಭದಲ್ಲಿ ಬೆಳಗ್ಗೆಯಿಂದ 7 ರಿಂದ 8 ಸಾವಿರ ಪ್ಯಾಕೇಟ್‌ಗಳು ಮಾರಾಟವಾದವು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement