ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ವರ್ಸಸ್‌ ಕಾಂಗ್ರೆಸ್‌: ಎಂ.ಬಿ.ಪಾಟೀಲ-ಯಶವಂತರಾಯಗೌಡ ಪಾಟೀಲ ಜಗಳ ತಾರಕಕ್ಕೆ

ವಿಜಯಪುರ: ‘ಪುಣೆಯಲ್ಲಿರುವ ಬಂಥನಾಳ ಶ್ರೀಗಳ ಆಸ್ತಿ ವಿಷಯದಲ್ಲಿ ನನ್ನ ಪಾತ್ರವಿದೆ ಎಂಬ ಮಾಜಿ ಸಚಿವ ಹಾಗೂ ಶಾಸಕ ಎಂ.ಬಿ.ಪಾಟೀಲ ಮಾಡಿರುವ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸವಾಲು ಹಾಕಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಥನಾಳ ಮಠದ ಭಕ್ತನಾದ ನಾನು ಅಲ್ಲಿಂದ ಒಳ್ಳೆಯ ಸಂಸ್ಕಾರ ಕಲಿತಿದ್ದೇನೆ. ಆ ಮಠಕ್ಕೆ ಒಳ್ಳೆಯದನ್ನು ಬಯಸುವೆ. ನಾನು ಆ ಸಂಸ್ಥೆಯ ಸದಸ್ಯನಲ್ಲ. ಆದರೂ ವಿನಾಕಾರಣವಾಗಿ ನನ್ನನ್ನು ಎಳೆದುತಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ, ಇದು ಸರಿಯಲ್ಲ’ ಎಂದರು.
ಭೀಮಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ. ಮರಳು ಅಕ್ರಮ ಸಾಗಾಟ ತಡೆಯುವಲ್ಲಿ ನನ್ನ ಪಾತ್ರವೇ ಮುಖ್ಯವಾಗಿದೆ. ಪ್ರತಿ ಸಭೆಯಲ್ಲೂ ಅಕ್ರಮ ನಡೆಯದಂತೆ ತಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವೆ. ಏನಾದರೂ ಅವರ ಬಳಿ ಇದ್ದರೆ ಸಾಬೀತುಪಡಿಸಲಿ. ಅಲ್ಲದಿದ್ದರೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದ ಅವರು, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಯಾ ಪೈಸೆ ವ್ಯತ್ಯಾಸವಾಗಿದ್ದರೂ ಆ ಸ್ಥಾನದಲ್ಲಿ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರ ಫೋಟೊ ಅಳವಡಿಸಲು ಆದೇಶಿಸಿದಕ್ಕಾಗಿ ವೀರಶೈವ ಲಿಂಗಾಯತ ಮಹಾಸಭಾ ಅಭಿನಂದನೆ ಸಲ್ಲಿಸಿತು. ಆ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾಡಿ ಎಂದು ಯಾರೂ ಮನವಿ ಸಲ್ಲಿಸಿರಲಿಲ್ಲ. ಆದರೆ, ಧರ್ಮ ವಿಭಜನೆ ವಿಷಯದಲ್ಲಿ ಕೈ ಹಾಕಿದ್ದೇ ನೀವು’ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲರಿಗೆ ತಿರುಗೇಟು ನೀಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ವಿವಿಧ ಜಿಲ್ಲೆಗಳ ಹಲವು ಕಾಂಗ್ರೆಸ್ ಅಭ್ಯರ್ಥಿಗಳು, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಕಾರಣದಿಂದಲೇ ನಾವು ಸೋತದ್ದು ಎಂದು ಕಾಂಗ್ರೆಸ್ ಸಭೆಯಲ್ಲೇ ಹೇಳಿದ್ದಾರೆ. ಇದು ನಾನು ಮಾಡುವ ಆರೋಪವಲ್ಲ, ಬೇರೆಬೇರೆ ಜಿಲ್ಲೆಯ ಸೋತ ಕಾಂಗ್ರೆಸ್‌ ಅಭ್ಯರ್ಥಿಗಳು ಹೇಳಿರುವುದು ಎಂದರು.
ಅವರಿಗಿಂತ ಮೊದಲೇ ನಮ್ಮ ಕುಟುಂಬದವರು ರಾಜಕಾರಣದಲ್ಲಿದ್ದರು. ಹೊಸದಾಗಿ ಜಿಲ್ಲಾ ಪರಿಷತ್ ರಚನೆಯಾದಾಗ ನಮ್ಮ ತಂದೆ ದಿ.ವಿಠ್ಠಲಗೌಡ ಪಾಟೀಲರು ಅಗರಖೇಡ ಕ್ಷೇತ್ರದಿಂದ ಗೆದ್ದ ಜಿಲ್ಲೆಯ ಏಕೈಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.’
ನಾನು ಜಿ.ಪಂ.ಸದಸ್ಯ, ಅಧ್ಯಕ್ಷ ಆಗಿರುವುದರಲ್ಲಿ ನಿಮ್ಮ ಪಾತ್ರವೇನೂ ಇಲ್ಲ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಬಿ.ಕೆ.ಗುಡದಿನ್ನಿ, ಮಿಸಾಳೆ ಅವರಂತಹ ನಾಯಕರ ಕೊಡುಗೆ ಇದೆ. ನನ್ನ ವಿರುದ್ಧ ಚುನಾವಣೆಯಲ್ಲಿ ನೀವು ಏನೇನು ಮಾಡಿದ್ದೀರಿ ಎಂಬುವುದಕ್ಕೆ ನಾನು ಸಾಕ್ಷಿ ಕೊಡಬಲ್ಲೆ. ಆದರೆ ಜನ ಹೆಚ್ಚಿನ ಪ್ರಮಾಣದಲ್ಲಿ ನನ್ನ ಕೈ ಹಿಡಿದಿದ್ದಾರೆ’ ಎಂದು ಹರಿಹಾಯ್ದರು.
ಸಿದ್ಧೇಶ್ವರ ಶ್ರೀಗಳ ಹೆಸರು ಹೇಳಿಕೊಂಡು ಪ್ರಚಾರ ಪಡೆಯುವುದು ಬಿಟ್ಟು, ಅವರ ಆದರ್ಶಗಳನ್ನು ಕಿಂಚಿತ್ತಾದರೂ ಅಳವಡಿಸಿಕೊಳ್ಳಿ. ಅವರು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ಅದನ್ನೇ ನೀವು ಬೇರಾವುದಕ್ಕೋ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement