ವೃತ್ತಿಪರ ಕೋರ್ಸುಗಳಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೇ.7.5 ಮೀಸಲಾತಿ:ತಮಿಳುನಾಡಿನಲ್ಲಿ ಮಸೂದೆ ಮಂಡನೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ಕೃಷಿ, ಮೀನುಗಾರಿಕೆ ಮತ್ತು ಕಾನೂನಿನಂತಹ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಶೇ. 7.5ರಷ್ಟು ಮೀಸಲಾತಿ ನಿಗದಿಪಡಿಸುವ ಮಸೂದೆಯನ್ನು ಇಂದು (ಗುರುವಾರ) ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮುಖ್ಯಮಂತ್ರಿ ಸ್ಟಾಲಿನ್ ಅವರು ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಲ್ಲಿ ಮೀಸಲಾತಿ ಒದಗಿಸುವ ನಿರ್ಧಾರ ಘೋಷಿಸಿದ್ದರು ಮತ್ತು ಮುಂದಿನ ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದೂ ಹೇಳಿದ್ದರು.
ಇಂದು (ಗುರುವಾರ) ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ ಮಾತನಾಡಿದ ಸ್ಟಾಲಿನ್, ಬಡ ಕುಟುಂಬದ ಹಿನ್ನೆಲೆ ಮತ್ತು ಗ್ರಾಮೀಣ ಹಿನ್ನೆಲೆ ಇರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವುದು ತುಂಬಾ ಕಡಿಮೆಯಾಗುತ್ತಿದೆ ಎಂದು ಹೇಳಿದರು.
2006ರಲ್ಲಿ ಅಂದಿನ ಡಿಎಂಕೆ ಸರ್ಕಾರ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಹೇಗೆ ರದ್ದುಗೊಳಿಸಿತು ಎಂಬುದನ್ನು ಸ್ಟಾಲಿನ್ ಇದೇ ವೇಳೆ ನೆನಪಿಸಿಕೊಂಡರು.
ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅನೇಕ ತೊಂದರೆಗಳಿವೆ. ಅವರು ಖಾಸಗಿ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಬೇಕು ಎಂಬುದು ನಮ್ಮ ಉದ್ದೇಶ ಎಂದು ಸ್ಟಾಲಿನ್ ಹೇಳಿದರು.
ತಮಿಳುನಾಡಿನ ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆಯ ಸದಸ್ಯರು ಕೂಡ ಈ ಮಸೂದೆಯನ್ನು ಸ್ವಾಗತಿಸಿದ್ದಾರೆ. ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ತಮ್ಮ ಪಕ್ಷವು ಮಸೂದೆಯನ್ನು ಸ್ವಾಗತಿಸುತ್ತದೆ ಎಂದು ಹೇಳಿದರು.
ಈ ವಿಧೇಯಕವನ್ನು ಸದನದಲ್ಲಿ ಸರ್ವಾನುಮತದಿಂದ ಅಂಗೀಕರಿಸುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement