ಜೆಎಸ್ಎಸ್‌ ನಲ್ಲಿ ಕ್ರೀಡಾ ದಿನಾಚರಣೆ: ಕ್ರೀಡಾ ವಿಷಯ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಲಿ ಎಂದ ಡಾ.ಅಜಿತ ಪ್ರಸಾದ

ಜೆಎಸ್ಎಸ್‌ ನಲ್ಲಿ ಕ್ರೀಡಾ ದಿನಾಚರಣೆ: ಕ್ರೀಡಾ ವಿಷಯ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಲಿ-ಡಾ.ಅಜಿತ ಪ್ರಸಾದ
ಧಾರವಾಡ:ಎಲ್ಲ ಶಿಕ್ಷಣ ಸಂಸ್ಥೆಗಳು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ ವಿದ್ಯಾರ್ಥಿಗಳನ್ನು ದೇಶದ ಉತ್ತಮ ಕ್ರೀಡಾಪಟುಗಳಾಗಿ ರೂಪಿಸುವಲ್ಲಿ ಸಹಕರಿಸಬೇಕು. ಕ್ರೀಡೆ ವಿದ್ಯಾಭ್ಯಾಸದ ಅವಿಭಾಜ್ಯ ಅಂಗವಾದಾಗ ಮಾತ್ರ ದೇಶವನ್ನು ಕ್ರೀಡೆಯಲ್ಲಿ ಉನ್ನತ ದರ್ಜೆಗೆ ಕೊಂಡೊಯ್ಯಬಹುದು ಎಂದು ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮೇಜರ್ ದ್ಯಾನಚಂದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಇದೀಗ ನೂತನ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಇದೇ ಸಂದರ್ಭದಲ್ಲಿ ಕ್ರೀಡೆಯನ್ನು ಒಂದು ವಿಷಯವನ್ನಾಗಿ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಬೇಕು. ಆಗ ಮಾತ್ರ ನಾವು ಕ್ರೀಡೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಲು ಸಾಧ್ಯ. ತಮ್ಮ ೧೬ ನೇ ವಯಸ್ಸಿನಲ್ಲಿಯೇ ಧ್ಯಾನಚಂದ ಅವರು ಸೈನ್ಯಕ್ಕೆ ಸೇರಿಕೊಂಡಿದ್ದರು. ಸುಬೇದಾರ ಮೇಜರ್ ಬೋಲೆಯವರು ಧ್ಯಾನಚಂದ್ ಅವರ ವಿಭಿನ್ನ ಶೈಲಿಯ ಆಟವನ್ನು ಗಮನಿಸಿ ಇವರಿಗೆ ಹಾಕಿ ಕ್ರೀಡೆಯ ಬಗ್ಗೆ ತರಬೇತಿ ನೀಡಿದರು. ಅಂದಿನಿಂದಲೇ ಭಾರತೀಯ ಸೈನ್ಯದ ವಿವಿಧ ವಲಯಗಳ ತಂಡಗಳ ಮಟ್ಟದಲ್ಲಿ ಆಡಿ ಅಂತಾರಾಷ್ಟ್ರಿಯ ಕ್ರೀಡಾಪಟುವಾಗಿ ರೂಪಗೊಂಡರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ೩ ಓಲಂಪಿಕ್ಸ್ ಸ್ಪರ್ಧೆಗಳಲ್ಲಿ ೩ ಬಾರಿ ಚಿನ್ನದ ಪದಕ ಗೆದ್ದು, ಹನ್ನೆರಡು ಪಂದ್ಯಗಳಿಂದ ಒಟ್ಟು ೩೩ ಗೋಲುಗಳನ್ನುಗಳಿಸಿದ್ದ ದಾಖಲೆ ಇನ್ನೂ ಸಾರ್ವಕಾಲಿಕ ದಾಖಲೆಯಾಗೆ ಉಳಿದಿದೆ ಎಂದರು.
ಬರ್ಲಿನ್ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಧ್ಯಾನ್ ಚಂದ್ ಅವರ ಆಟ ಕಂಡ ಹಿಟ್ಲರ್ ಧ್ಯಾನ್ ಚಂದ್ ಅವರಿಗೆ ಸೇನೆಯಲ್ಲಿ ಮೇಜರ್ ಹುದ್ದೆ, ಜರ್ಮನಿಯ ಪೌರತ್ವ, ಕೊಲೋನೆಲ್ ಗೌರವದ ಕೊಡುಗೆ ನೀಡಿ ಆಹ್ವಾನಿಸಿದ್ದರು, ಆದರೆ ಇದನ್ನು ತಿರಸ್ಕರಿದ ಧ್ಯಾನ್ ಚಂದರು ನಾನೊಬ್ಬ ಅಪ್ಪಟ ಭಾರತೀಯ, ಭಾರತದಲ್ಲೇ ನಾನು ಉಳಯುತ್ತೇನೆ ಎಂದು ನಯವಾಗಿ ಹೇಳಿ ದೇಶಪ್ರೇಮ ಮೆರೆದಿದ್ದರು. ಧ್ಯಾನಚಂದ್‌ ಅವರ ಈ ಸಾಧನೆಯಿಂದಲೆ ಭಾರತದಲ್ಲಷ್ಟೆ ಅಲ್ಲದೇ ವಿಶ್ವದಾದ್ಯಂತ ಹಾಕಿ ಆಟ ಪ್ರಸಿದ್ಧಿ ಪಡೆದಿದ್ದು ಎಂದರೆ ತಪ್ಪಾಗಲಾರದು. ಈ ಕಾರಣಕ್ಕಾಗಿ ಧ್ಯಾನಚಂದ್‌ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಮೇಜರ್ ಧ್ಯಾನಚಂದ್‌ ಕ್ರೀಡೆಗೆ ಆದರ್ಶಪ್ರಾಯರು.
ಇದೆ ಸಂದರ್ಭದಲ್ಲಿ ೭೫ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕ್ರೀಡಾ ಪಟುಗಳಿಗೆ ಜೆ.ಎಸ್.ಎಸ್ ಸಂಸ್ಥೆ ವಿಶೇಷ ಪ್ರೋತ್ಸಾಹ ಧನವನ್ನು ಘೋಷಿಸಿದ್ದನ್ನು ಸ್ಮರಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಯಬೇಕು. ಸಾಧಿಸುವ ಛಲ ಹೊಂದಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್ ನ ಪ್ರಾಚಾರ್ಯರಾದ ಡಾ.ಇಂದು ಪಂಡಿತ್, ಸೂರಜ್ ಜೈನ್, ಮಹಾವೀರ ಉಪಾದ್ಯೆ, ಜಿನೇಂದ್ರ ಕುಂದಗೋಳ, ಶ್ರವಣ ಯೋಗಿ, ಆರ್.ಸಿ ಮಠಪತಿ, ಗಣೇಶ ನಾಯಕ, ಮಂಜುನಾಥ ಚಟ್ಟೇರ ಉಪಸ್ಥಿತರಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement