ಒಂದೇ ದಿನದಲ್ಲಿ ಅತಿ ಹೆಚ್ಚು ಲಸಿಕೆ ನೀಡಿಕೆ: ದೇಶದಲ್ಲೇ ಕರ್ನಾಟಕದ ಹೊಸ ದಾಖಲೆ

ಬೆಂಗಳೂರು: ಕರ್ನಾಟಕದಲ್ಲಿ ಒಂದೇ ದಿನದಲ್ಲಿ ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು
ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿನ್ನೆ (ಬುಧವಾರ) ಒಂದೇ ದಿನ ರಾಜ್ಯದಲ್ಲಿ 12,04,402 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದು ದಾಖಲೆಯ ಪ್ರಮಾಣದ ಲಸಿಕೆಯಾಗಿದ್ದು, ಕರ್ನಾಟಕವೇ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 1,85,488 ಲಸಿಕೆಗಳನ್ನು ನೀಡಲಾಗಿದೆ. ಅದೇ ರೀತಿ ಬೆಳಗಾವಿಯಲ್ಲಿ 99,973 ಜನರಿಗೆ ಕೋವಿಡ್ ಲಸಿಕೆಗಳನ್ನು ಹಾಕಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾಡಳಿತ, ಬಿಬಿಎಂಪಿ, ಸ್ವಯಂ ಸೇವಕರು ಸೇರಿದಂತೆ ಎಲ್ಲರ ಪರಿಶ್ರಮದಿಂದ ಇದು ಸಾಧ್ಯವಾಯಿತು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ 50 ಸಾವಿರ, ಚಿಕ್ಕಮಗಳೂರು 44, ಮೈಸೂರು 51 ಸಾವಿರ ಹೀಗೆ 27 ಜಿಲ್ಲೆಗಳಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಲಸಿಕೆ ಹಾಕಲಾಗಿದೆ. 20ಸಾವಿರಕ್ಕಿಂತ ಕಡಿಮೆ ಲಸಿಕೆಯನ್ನು ಕೊಡಗಿನಲ್ಲಿ ಹಾಕಲಾಗಿದೆ. ಅದೇ ರೀತಿ ಚಾಮರಾಜನಗರ, ಯಾದಗಿರಿ, ಕಲಬುರಗಿ ಮತ್ತಿತರ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದ ಲಸಿಕೆ ನೀಡಲಾಗಿದೆ. ಇಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಪ್ರತಿ ಬುಧವಾರ ಲಸಿಕಾ ಉತ್ಸವ ಎಂದು ಆಚರಣೆ ಮಾಡುತ್ತಿದ್ದೇವೆ. ಈ ದಿನದಲ್ಲಿ ಲಸಿಕೆಯನ್ನು ದ್ವಿಗುಣಗೊಳಿಸುವುದು ನಮ್ಮ ಉದ್ದೇಶ. ಪ್ರತಿ ದಿನ ಐದು ಲಕ್ಷ ಲಸಿಕೆ ಯನ್ನು ನೀಡುವ ಗುರಿ ಹೊಂದ ಲಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು, ಪೋಷಕರು ಹಾಗೂ ಮತ್ತಿತರರಿಂದ ಒತ್ತಡ ಬಂದ ಕಾರಣ ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ವಿಧಿಸಲಾಗಿದ್ದ ಒಂದು ವಾರದ ಹೋಂ ಕ್ವಾರಂ ಟೈನ್‍ನಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಒಂದು ವಾರ ಹೋಮ್ ಕ್ವಾರಂಟೈನ್‍ಗೆ ಒಳಗಾದರೆ ಅವರ ಪಾಠ ಪ್ರವಚನ, ಪರೀಕ್ಷೆಗಳಿಗೆ ತೊಂದರೆಯಾಗುತ್ತದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಒಂದಿಷ್ಟು ಬದಲಾವಣೆ ಮಾಡಲಾಗಿದೆ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ಕೇರಳದಲ್ಲಿ ನಮಗೆ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿರುವುದು ಆತಂಕ ತಂದಿದೆ. ಅಲ್ಲಿಂದ ಬರುವವರಿಗೆ ಒಂದು ವಾರ ಹೋಮ್ ಕ್ವಾರಂಟೈನ್ ಮಾಡಿದ್ದೆವು. ಇಂದು ನೀಟ್ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳು ನಮ್ಮ ಬಳಿ ಆತಂಕ ತೋಡಿಕೊಂಡರು. ಇನ್ನು ಮುಂದೆ ಕಾಲೇಜಿನ ವಿದ್ಯಾರ್ಥಿಗಳಿಗೆ ಅಲ್ಲಿನ ಆಡಳಿತ ಮಂಡಳಿ, ಕೈಗಾರಿಕೆಗಳಿದ್ದರೆ ಸಂಬಂಧಪಟ್ಟ ಮಾಲೀಕರು ನೋಡಿಕೊಳ್ಳಬೇಕೆಂದು ಸೂಚಿಸಿದರು.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು, ಇತರರ ನಿವಾಸದ ಮೇಲೆ ಐಟಿ ದಾಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement