ಸಾಮಾಜಿಕ ಮಾಧ್ಯಮ ವೇದಿಕೆಗಳು ನಕಲಿ ಸುದ್ದಿಯಿಂದ ತುಂಬಿವೆ; ಅವರು ನ್ಯಾಯಾಧೀಶರಿಗೂ ಪ್ರತಿಕ್ರಿಯಿಸುವುದಿಲ್ಲ: ಸುಪ್ರೀಂಕೋರ್ಟ್

ನವದೆಹಲಿ :ಸುಪ್ರೀಂ ಕೋರ್ಟ್ ಗುರುವಾರ ವೆಬ್ ಪೋರ್ಟಲ್‌ಗಳು ಮತ್ತು ಯೂಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಹರಡುವ ನಕಲಿ ಸುದ್ದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ, ಆದರೆ ಅಂತಹ ಸಾಮಾಜಿಕ ಮಾಧ್ಯಮ ದೈತ್ಯರು ನ್ಯಾಯಾಧೀಶರಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದೆ.

ಇಂತಹ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಕೇವಲ ಪ್ರಬಲರ ಮಾತುಗಳನ್ನು ಕೇಳುತ್ತವೆ ಮತ್ತು ನ್ಯಾಯಾಂಗ ಸಂಸ್ಥೆಗಳ ಬಗ್ಗೆ ಯಾವುದೇ ಜವಾಬ್ದಾರಿ ಇಲ್ಲ ಎಂದು ಕೋರ್ಟ್ ಗಮನಿಸಿದೆ.

ಸುಳ್ಳು ಸುದ್ದಿಗಳನ್ನು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ವೆಬ್ ಪೋರ್ಟಲ್ ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಕೆಲವು ಟಿವಿ ಸುದ್ದಿ ವಾಹಿನಿಗಳು ತಾವು ಪ್ರಸಾರ ಮಾಡುವ ಸುದ್ದಿಗಳಿಗೆ ಕೋಮಿನ ಬಣ್ಣ ಹಚ್ಚುತ್ತಿವೆ ಎಂದು ಸುಪ್ರೀಂ ಕೋರ್ಟ್   ಹೇಳಿದೆ.
ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎನ್‌.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಎ.ಎಸ್‌.ಬೋಪಣ್ಣ ಅವರಿದ್ದ ನ್ಯಾಯಪೀಠ, ಜಮಿಯಾತ್‌ ಉಲೇಮಾ-ಐ-ಹಿಂದ್‌ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡುವ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿಯಲ್ಲಿ ದೆಹಲಿಯ ಮರ್ಕಜ್‌ ನಿಜಾಮುದ್ದೀನ್‌ ನಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆ ಅರ್ಜಿಯಲ್ಲಿ ಕೋರಿತ್ತು.
ವಿಚಾರಣೆ ನಡೆಸಿದ ನ್ಯಾಯಪೀಠ, ‘ಕೆಲವು ಖಾಸಗಿ ಸುದ್ದಿ ವಾಹಿನಿಗಳ ಮೂಲಕ ಪ್ರಸಾರವಾಗುತ್ತಿರುವ ಸುದ್ದಿಗಳಿಗೆ ಧಾರ್ಮಿಕ ಬಣ್ಣ ಬಳಿಯಲಾಗುತ್ತಿದೆ. ದೇಶದಲ್ಲಿ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟಾಗುವುದಕ್ಕೆ ಇದು ಕಾರಣವಾಗುತ್ತದೆ ಎಂದಿದ್ದಲ್ಲದೇ, ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿರುವ ಸುದ್ದಿ ವಾಹಿನಗಳ ಮೇಲೆ, ಸಾಮಾಜಿಕ ಮಾಧ್ಯಮಗಳು ಹಾಗೂ ವೆಬ್ ಪೋರ್ಟಲ್ ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದೆ.
ಯಾರೂ ಬೇಕಾದರೂ ಯೂಟ್ಯೂಬ್ ಚಾನೆಲ್ ಗಳನ್ನು ಆರಂಭಿಸಬಹುದಾಗಿದೆ. ಕೆಲವು ಯ್ಯೂಟ್ಯೂಬ್ ಚಾನೆಲ್ ಗಳ ಮೂಲಕ ಪ್ರಸಾರವಾಗುವ ಸುದ್ದಿಗಳಿಗೆ ಯಾವುದೇ ಪುರಾವೆಗಳೇ ಇರುವುದಿಲ್ಲ. ಇಂತಹ ಕೆಲವು ಯೂಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರವಾಗು ಸುಳ್ಳು ಸುದ್ದಿಗಳಿಗೆ ಯಾವುದೇ ನಿಯಂತ್ರಣವಿಲ್ಲ ಎಂದು ನ್ಯಾಯಪೀಠ ತೀವ್ರ ಅಸಮಧಾನ ವ್ಯಕ್ತಪಡಿಸಿದೆ.
ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧೀಶರು, ಕೋರ್ಟ್ ಬಗ್ಗೆಯೂ ಅವಹೇಳನಕಾರಿಯಾಗಿ ಬರೆಯಲಾಗುತ್ತದೆ. ಇದ್ಯಾವುದಕ್ಕೂ ನಿಯಂತ್ರಣವೇ ಇಲ್ಲ ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ದೇಶದ ಹಲವು ಹೈ ಕೋರ್ಟ್ ಗಳಲ್ಲಿ ‘ಸಾಮಾಜಿಕ ಮಾಧ್ಯಮಗಳು, ವೆಬ್‌ಪೋರ್ಟಲ್‌ ಗಳು ಒಳಗೊಂಡು ಆನ್‌ ಲೈನ್‌ ಪ್ಲಾಟ್ ಫಾರ್ಮ್ ಗಳ ಮೂಲಕ ಪ್ರಸಾರವಾಗುವ ಮಾಹಿತಿ ನಿಯಂತ್ರಣಕ್ಕೆ ರೂಪಿಸಿರುವ ನೂತನ ಮಾಹಿತಿ ಹಾಗೂ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿಸಿದಂತೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ ಗೆ ಈ ಅರ್ಜಿಗಳನ್ನು ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದ್ದು,
ಮನವಿ ಪರಿಗಣಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಆರು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement