ಉತ್ತರ ಪ್ರದೇಶದ ಮಾಜಿ ರಾಜ್ಯಪಾಲರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಲಕ್ನೋ: ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕಾಗಿ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಜೀಜ್‌ ಖುರೇಷಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಬಿಜೆಪಿ ನಾಯಕ ಆಕಾಶಕುಮಾರ್‌ ಸಕ್ಸೇನಾ ನೀಡಿದ ದೂರಿನ ಮೇರೆಗೆ ರಾಮಪುರ ಜಿಲ್ಲೆಯ ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.
‘ಯೋಗಿ ಆದಿತ್ಯನಾಥ್‌ ಸರ್ಕಾರ ರಕ್ತ ಹೀರುವ ರಾಕ್ಷಸ’ ಎಂದು ಖುರೇಷಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸಕ್ಸೇನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ಅವರ ಮನೆಗೆ ಭೇಟಿ ನೀಡಿ, ಅವರ ಪತ್ನಿ ತಾಝೀನ್‌ ಫತ್ಮಾ ಜತೆ ಸಮಾಲೋಚನೆ ನಡೆಸಿದ ಬಳಿಕ ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಖುರೇಷಿ ಈ ಹೇಳಿಕೆ ನೀಡಿದ್ದಾರೆ. ಖುರೇಷಿ ಹೇಳಿಕೆಯಿಂದ ಎರಡು ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಯಾಗಲಿದೆ. ಇದರಿಂದ, ಸಮಾಜದಲ್ಲಿ ಅಶಾಂತಿ ನೆಲೆಸಲಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಖುರೇಷಿ ಅವರ ಹೇಳಿಕೆ ಒಳಗೊಂಡಿರುವ ಪೆನ್‌ಡ್ರೈವ್‌ ಅನ್ನು ಸಹ ಪೊಲೀಸರಿಗೆ ನೀಡಲಾಗಿದೆ. ಖುರೇಷಿ ಅವರ ವಿರುದ್ಧ ಸೆಕ್ಷನ್‌ 153ಎ ( ಧರ್ಮಗಳ ಆಧಾರದ ಮೇಲೆ ಎರಡು ಗುಂಪುಗಳ ನಡುವೆ ದ್ವೇಷ ಬಿತ್ತುವುದು), 153ಬಿ (ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವುದು), 124ಎ (ದೇಶದ್ರೋಹ) ಮತ್ತು 505(1)(ಬಿ) (ಭಯ ಸೃಷ್ಟಿಸುವ ಉದ್ದೇಶ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರ ವಿರುದ್ಧ ಕಾನೂನಿನ ರೀತ್ಯಾ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾಗಿರುವ ಖುರೇಷಿ (81) ಅವರು, 2014ರಿಂದ 2015ರವರೆಗೆ ಮಿಜೋರಾಂ ರಾಜ್ಯಪಾಲರಾಗಿದ್ದರು. ಕೆಲ ಕಾಲ ಉತ್ತರ ಪ್ರದೇಶದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement