ನೂರು ದಿನಗಳೊಳಗೆ ಎನ್‍ಒಸಿ ಇಲ್ಲದೆ ಟ್ರಾನ್ಸ್‌ಫಾರ್ಮರ್‌ : ಸಚಿವ ಸುನಿಲಕುಮಾರ

ಬೆಂಗಳೂರು: ಗ್ರಾಮ ಪಂಚಾಯತ ಮಟ್ಟದಲ್ಲಿ ಮನೆ ಕಟ್ಟಿ ವಿದ್ಯುತ್ ಸಂಪರ್ಕ ಪಡೆಯಲಾಗದವರಿಗೆ ನೂರು ದಿನದೊಳಗೆ ಎನ್‍ಒಸಿ ಇಲ್ಲದೆ ವಿದ್ಯುತ್ ಪಡೆಯಲು ಟ್ರಾನ್ಸ್‍ಫಾರ್ಮ್‍ರ್ ಬ್ಯಾಂಕ್ ಮಾಡಲು ನಿರ್ಧರಿಸಲಾಗಿದೆ ಎಂದು ಇಂಧನ ಖಾತೆ ಸಚಿವ ವಿ.ಸುನೀಲಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಕಷ್ಟಪಟ್ಟು ಮನೆ ಕಟ್ಟಿಕೊಂಡಿರುವ ಬಡವರು ವಿದ್ಯುತ್ ಪಡೆಯಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಬೆಳಕು ಯೋಜನೆಯಡಿ ನೂರು ದಿನದೊಳಗೆ ಎನ್‍ಒಸಿ ಇಲ್ಲದೆ ಟ್ರಾನ್ಸ್‍ಫಾರ್ಮ್‍ರ್ ಬ್ಯಾಂಕ್ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿಯೊಂದು ಮನೆಗೂ ವಿದ್ಯುತ್ ಪೂರೈಸಬೇಕು ಎಂಬುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸಾಗಿದೆ. ಆ ನಿಟ್ಟಿನಲ್ಲಿ ರಾಜ್ಯದ ಯಾವುದೇ ಭಾಗದಲ್ಲೂ ಟ್ರಾನ್ಸ್‍ಫಾರ್ಮ್‍ರ್‍ಗಳು ಕೆಟ್ಟು ಹೋದರೆ 24 ಗಂಟೆಯೊಳಗೆ ಬದಲಾಯಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ ನಾವು ಬಡವರಿಗೆ ಬೋರ್‍ವೆಲ್‍ಗಳನ್ನು ಹಾಕಿಸಿ ಕೊಡುತ್ತೇವೆ. ಅನೇಕರು ವಿದ್ಯುತ್ ಬಿಲ್ ಪಾವತಿ ಸಲಾಗದಂತಹ ಸ್ಥಿತಿಯಲ್ಲಿದ್ದಾರೆ. ನೀರಾವರಿ ನಿಗಮದಿಂದ ಬೋರ್‍ವೆಲ್ ಕೊರೆಸುತ್ತೇವೆ. ವಿದ್ಯುತ್ ನಿಗಮದಿಂದ ಹಣವನ್ನು ಭರ್ತಿ ಮಾಡಬೇಕು. ಇನ್ನು ಮುಂದೆ ನಿಗಮವು ಪಾವತಿಸಿದ 30 ದಿನದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಪ್ರೀಪೇಡ್ ಮೀಟರ್ ಯೋಜನೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.
ಪ್ರೀಪೇಡ್ ಮೀಟರ್ ಅಳವಡಿಕೆಯಾದರೆ ಎಷ್ಟು ಅಗತ್ಯವಿರತ್ತದೋ ಅಷ್ಟು ವಿದ್ಯುತ್ ಬಳಕೆ ಮಾಡಿಕೊಳ್ಳಬಹುದು. ಪದೇ ಪದೇ ಬಾಕಿ ಹಣ ಕಟ್ಟುವಂತೆ ಒತ್ತಾಯಿಸುವ ಪ್ರಮೇಯವೂ ತಪ್ಪುತ್ತದೆ. ಇದನ್ನು ಸರ್ಕಾರಿ ಸಂಸ್ಥೆಗಳಲ್ಲಿ ಇದನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗಗಳಲ್ಲಿ ಕೃಷಿ ಪಂಪ್‍ಸೆಟ್ ಯೋಜನೆ ಮೂಲಕ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಚಿಂತನೆ ನಡೆಸಲಾಗಿದೆ. ರಾಜ್ಯದ 60ಕ್ಕೂ ಹೆಚ್ಚು ಕಡೆ ಜಾಗಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಹ ಯೋಜನೆ ರೂಪಿಸಲಾಗುತ್ತದೆ ಎಂದ ಸಚಿವರು, ಇಲಾಖೆಯಲ್ಲಿ ಹಲವು ದಿನಗಳಿಂದ ಖಾಲಿ ಇರುವ ಲೈನ್‍ಮೆನ್‍ಗಳು, ಜೂನಿಯರ್ ಎಂಜಿನಿಯರ್ ಸೇರಿದಂತೆ ಬಾಕಿ ಇರುವ ಮತ್ತಿತರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement