ರೈತಪರ ಸಂಘಟನೆಗಳಿಂದ ಸೆಪ್ಟಂಬರ್ 27ಕ್ಕೆ ಕರ್ನಾಟಕ ಬಂದ್​

ಬೆಂಗಳೂರು,: ವಿವಿಧ ರೈತಪರ ಸಂಘಟನೆಗಳು ಮತ್ತು ಕಿಸಾನ್ ಮೋರ್ಚಾಗಳು ಜಂಟಿಯಾಗಿ ಸೆಪ್ಟಂಬರ್ 27ಕ್ಕೆ (ಸೋಮವಾರ) ಕರ್ನಾಟಕ ಬಂದ್​ಗೆ ಕರೆನೀಡಿವೆ. ಇದಕ್ಕೂ ಮೊದಲು ಸೆಪ್ಟಂಬರ್ 13ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ರೈತ ಸಂಘಗಳು ಹಮ್ಮಿಕೊಂಡಿವೆ.
ಈ ಬಗ್ಗೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, “ಸೆಪ್ಟಂಬರ್ 27ಕ್ಕೆ ಕರ್ನಾಟಕ ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಬಂದ್​ಗೆ ಬೆಂಬಲ ನೀಡಲಿದೆ ಎಂದರು.
ಕೃಷಿ ಕಾನೂನು ವಿರೋಧಿಸಿ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟಂಬರ್ 27ಕ್ಕೆ ಭಾರತ ಬಂದ್​ಗೆ ಕರೆನೀಡಿದೆ ಎಂದು ಹೇಳಿದರು.
“ಮೂರು ಪ್ರಮುಖ ವಿಚಾರಗಳನ್ನು ಇಟ್ಟುಕೊಂಡು ಬಂದ್ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯಿದೆ, ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದೇ ಇರುವುದು ಮತ್ತು ಬೆಲೆ ಏರಿಕೆ ವಿರುದ್ದ ಬಂದ್ ಗೆ ಕರೆ ನೀಡಲಾಗಿದೆ”ಎಂದು ಶಾಂತಕುಮಾರ್ ಹೇಳಿದರು.
ಸೆಪ್ಟಂಬರ್ 13ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಡೀ ದೇಶದಲ್ಲಿ ರೈತರ ವಿರುದ್ದ ಇರುವ ಪ್ರಮುಖ ರಾಜ್ಯವೆಂದರೆ ಅದು ಕರ್ನಾಟಕ. ಬೊಮ್ಮಾಯಿ ಸರಕಾರ ರೈತ ವಿರೋಧಿ ನೀತಿಯನ್ನು ಕೈಬಿಡಬೇಕು”ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಸೆಪ್ಟಂಬರ್ 27ಕ್ಕೆ ಕರೆಯಲಾಗಿರುವ ಕರ್ನಾಟಕ ಬಂದ್​ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದೇವೆ. ನಾವು ಅಂದು ಇಡೀ ರಾಜ್ಯವನ್ನು ಬಂದ್ ಮಾಡುತ್ತೇವೆ. ಯಡಿಯೂರಪ್ಪನವರಂತೆ ಬೊಮ್ಮಾಯಿಯವರೂ ರೈತ ವಿರೋಧಿ ಆಗಬಾರದು”ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ದೇಶದ ಸರ್ವೋಚ್ಚ ನ್ಯಾಯಾಲಯ ಕೃಷಿ ಕಾಯ್ದೆಯ ಬಗ್ಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆಯನ್ನು ತಡೆಹಿಡಿಯುವಂತೆ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ, ಕರ್ನಾಟಕ ಸರಕಾರ ಅದೇ ದಾರಿಯಲ್ಲಿ ಸಾಗಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಉಗ್ರ ರೂಪ ತಾಳಲಿದೆ”ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement