ದೆಹಲಿಯಲ್ಲಿ 75 ವರ್ಷ ಹಳೆಯ ಕಟ್ಟಡ ಕುಸಿತ; ಇಬ್ಬರು ಮಕ್ಕಳು ಸಾವು

ನವದೆಹಲಿ: ಉತ್ತರ ದೆಹಲಿಯ ಜನದಟ್ಟಣೆಯಿಂದ ಕೂಡಿರುವ ಸಬ್ಜಿ ಮಂಡಿ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಸೋಮವಾರ ಕುಸಿದಿದ್ದು, ತಮ್ಮ ತಾಯಿಯೊಂದಿಗೆ ಅಲ್ಲೇ ಹಾದುಹೋಗುತ್ತಿದ್ದ ಅಣ್ಣ-ತಮ್ಮ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟಿರುವ ಇಬ್ಬರು ಮಕ್ಕಳು 7 ಮತ್ತು 12 ವರ್ಷ ವಯಸ್ಸಿನವರಾಗಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಮೂರರಿಂದ ನಾಲ್ಕು ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 72 ವರ್ಷದ ರಾಮ್‌ಜಿ ದಾಸ್ ಎಂಬುವವರನ್ನು ರಕ್ಷಿಸಲಾಗಿದ್ದು, ಅವರ ತಲೆಗೆ ಗಾಯವಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಟ್ಟಡದ ನೆಲಮಹಡಿಯು 75 ವರ್ಷ ಹಳೆಯದ್ದು ಎನ್ನಲಾಗಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇನ್ನುಳಿದವುಗಳು ವಾಸಕ್ಕೆ ಬಳಸಲಾಗುತ್ತಿತ್ತು.
ಜಂಟಿ ಪೊಲೀಸ್ ಆಯುಕ್ತ (ಸೆಂಟ್ರಲ್) ಎನ್.ಎಸ್.ಬುಂದೇಲಾ ಮಾತನಾಡಿ, ‘ಮಕ್ಕಳಿಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದ ವೇಳೆಯಲ್ಲಿ ಅವರಿಬ್ಬರು ಮೃತಪಟ್ಟಿದ್ದಾರೆ. ಕಟ್ಟಡ ಕುಸಿಯುವ ವೇಳೆ ಅವರಿಬ್ಬರು ತಮ್ಮ ತಾಯಿಯೊಂದಿಗೆ ಹಾದು ಹೋಗುತ್ತಿದ್ದರು. ಪ್ರಕರಣ ದಾಖಲಿಸಿಕೊಂಡು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಸ್ಥಳೀಯ ತಂಡ, ಎಂಸಿಡಿ, ಎನ್‌ಡಿಆರ್‌ಎಫ್ ಸೇರಿ ಇತರ ತಂಡಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಏಳು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement