ಶಾಲಾ ಶುಲ್ಕ ಶೇ 15ರಷ್ಟು ಕಡಿತ; ಹೈಕೋರ್ಟ್‌ ಆದೇಶ

ಬೆಂಗಳೂರು: ಖಾಸಗಿ ಶಾಲೆಗಳ ಬೋಧನಾ ಶುಲ್ಕವನ್ನು ಶೇ.15ರಷ್ಟು ಕಡಿತ ಮಾಡಿ ಹೈಕೋರ್ಟ್ ಆದೇಶ ಮಾಡಿದೆ. ಶೇ.30ರಷ್ಟು ಶಾಲಾ ಶುಲ್ಕ ಕಡಿತ ಮಾಡಿದ್ದ ಸರ್ಕಾರದ ಕ್ರಮವನ್ನು ವಿರೋಧಿಸಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ 2020-21ನೆ ಸಾಲಿಗೆ ಬೋಧನಾ ಶುಲ್ಕವನ್ನು ಶೇ.15ರಷ್ಟು ಕಡಿತಗೊಳಿಸಿ ಆದೇಶಿಸಿದೆ.
ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಕಾರಣ ಶಾಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. 18 ತಿಂಗಳು ಶಾಲೆಗಳನ್ನು ತೆರೆದಿರಲಿಲ್ಲ. ಆನ್‍ಲೈನ್ ಮೂಲಕ ಶಾಲೆಗಳು ನಡೆದಿದ್ದವು.ಶಾಲಾ ಶುಲ್ಕವನ್ನು ಕಡಿತ ಮಾಡಬೇಕೆಂದು ಪೋಷಕರ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದವು. ಸರ್ಕಾರ ಶೇ.30ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ ಆದೇಶ ಹೊರಡಿಸಿತ್ತು.
ಸಿಬ್ಬಂದಿ ವೇತನ ಸೇರಿದಂತೆ ಶಾಲೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಶುಲ್ಕ ಕಡಿತ ಮಾಡಬಾರದು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಶೇ.15ರಷ್ಟು ಶುಲ್ಕವನ್ನು ಕಡಿತಗೊಳಿಸಿ ಆದೇಶ ನೀಡಿದೆ.
ಸ್ವಾಗತ: ಶಾಲಾ ಶುಲ್ಕ ವಿಚಾರದ ಗೊಂದಲಕ್ಕೆ ರಾಜ್ಯ ಹೈಕೋರ್ಟ್‌ ಗುರುವಾರ ತೆರೆ ಎಳೆದಿದ್ದು, ಶೇ 15ರಷ್ಟು ಕಡಿತಗೊಳಿಸಲು ಸಲಹೆ ನೀಡಿದೆ. ಈ ತೀರ್ಪು ಸ್ವಾಗತಾರ್ಹ’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟಗಳ (ಕ್ಯಾಮ್ಸ್‌) ಹೇಳಿದೆ.
ಇಡೀ ದೇಶಕ್ಕೆ ಅನ್ವಯವಾಗುವಂತೆ ಈ ಹಿಂದೆಯೇ ಶೇ 15ರಷ್ಟು ಶುಲ್ಕ ಕಡಿತಕ್ಕೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿತ್ತು. ಅದಕ್ಕೆ ಪೂರಕವಾಗಿ ಹೈಕೋರ್ಟ್‌ ಕೂಡಾ ತೀರ್ಪು ನೀಡಿದೆ’ ಎಂದು ಕ್ಯಾಮ್ಸ್‌ ಕಾರ್ಯದರ್ಶಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement