ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ಇದು ಸೂಕ್ತ ಸಮಯವಲ್ಲ: ನಿರ್ಮಲಾ ಸೀತಾರಾಮನ್

ನವದೆಹಲಿ: ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವೆ ತೆರಿಗೆ(ಜಿಎಸ್‌ಟಿ) ವ್ಯಾಪ್ತಿಗೆ ಸೇರಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲು ಇದು ಸರಿಯಾದ ಸಮಯವಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಹಣಕಾಸು ಸಚಿವರು ಮತ್ತು ಜಿಎಸ್‌ಟಿ ಕೌನ್ಸಿಲ್ ಸಭೆ ಸದಸ್ಯರೊಂದಿಗೆ 45ನೇ ಸಭೆ ನಡೆಸಿದರು. ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ಕಳೆದ 2019 ಡಿಸೆಂಬರ್ 18ರ ಬಳಿಕ ಮೊದಲ ಬಾರಿಗೆ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಸಲಾಯಿತು.
ಶುಕ್ರವಾರ ನಡೆಸಿದ ಜಿಎಸ್‌ಟಿ ಕೌನ್ಸಿಲ್ ಸಭೆಯ ಮುಖ್ಯ ಉದ್ದೇಶ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವುದಾಗಿತ್ತು. ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರಿಸುವ ಕುರಿತು ಚರ್ಚೆಯನ್ನು ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ತೆಗೆದುಕೊಳ್ಳಲಾಯಿತು. ಈ ವಿಷಯವನ್ನು ಕೌನ್ಸಿಲ್ ಮುಂದೆ ಚರ್ಚೆಗೆ ಇಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಆದಾಗ್ಯೂ, ಕೇಂದ್ರ ಮತ್ತು ರಾಜ್ಯಗಳು ಜಿಎಸ್‌ಟಿ ಆಡಳಿತದ ವ್ಯಾಪ್ತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿವೆ.
ಜೈವಿಕ ಡೀಸೆಲ್ ಮೇಲಿನ ತೆರಿಗೆ ಕಡಿತ:
ಡೀಸೆಲ್‌ನೊಂದಿಗೆ ಬೆರೆಸುವ ಜೈವಿಕ ಡೀಸೆಲ್ ಮೇಲಿನ ಜಿಎಸ್‌ಟಿ ದರವನ್ನು (ತೈಲ ಮಾರುಕಟ್ಟೆ ಕಂಪನಿಗಳು ಬಳಸುವ) ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ರೈಲ್ವೆ ಬಿಡಿಭಾಗ, ಲೋಕೋಮೋಟಿವ್‌ಗಳ ಮೇಲಿನ ಜಿಎಸ್‌ಟಿಯನ್ನು ಪ್ರಸ್ತುತ ಶೇ.12 ರಿಂದ ಶೇ.18ಕ್ಕೆ ಹೆಚ್ಚಿಸಲು ಕೌನ್ಸಿಲ್ ಅನುಮೋದನೆ ನೀಡಿದೆ.
ಭಾರತದಲ್ಲಿ ಇಂಧನ ಬೆಲೆ ಗಗನಮುಖಿಯಾಗಿ ಏರಿಕೆಯಾಗುತ್ತಿರುವುದರ ನಡುವೆ ಕಳೆದ ಜೂನ್ ತಿಂಗಳಿನಲ್ಲಿ ರಿಟ್ ಅರ್ಜಿಯೊಂದು ಕೇರಳದ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಕುರಿತು ಕೌನ್ಸಿಲ್ ಗೆ ಸೂಚನೆ ನೀಡಿತ್ತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement