ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ರೈಲು ಸೇವೆಯ ದೈನಂದಿನ ಓಡಾಟದ ಅವಧಿಯನ್ನು ಬೆಳಗ್ಗೆ 6 ರಿಂದ ರಾತ್ರಿ 9.30 ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಮೊದಲು ಮೇಟ್ರೋ ರೈಲು ಸಂಚಾರದ ಅವಧಿ ಬೆಳಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಮಾತ್ರ ಇತ್ತು. ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಬಳಿಕ ಜನಜೀವನ ಅಸ್ತವ್ಯಸ್ತವಾಗಿತ್ತು. ಹೀಗಾಗಿ ಲಾಕ್ಡೌನ್ ವಿಧಿಸಿದ್ದರಿಂದ ಹಾಗೂ ಆ ನಂತರವೂ ಮೆಟ್ರೋ ಸೇವೆ ಸಮಯದಲ್ಲಿ ವ್ಯತ್ಯಾಸ ಆಗಿತ್ತು.
ಇದೀಗ ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆ ಆಗುತ್ತಿದ್ದು, ಜನಜೀವನ ಬಹುತೇಕ ಸಹಜ ಸ್ಥಿತಿಗೆ ಮರಳುವ ಹಂತದಲ್ಲಿದೆ. ಹೀಗಾಗಿ, ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ ಮೆಟ್ರೋ ಕಾರ್ಯನಿರ್ವಹಿಸುವ ಅವಧಿಯನ್ನು ಪರಿಷ್ಕರಿಸಲಾಗಿದೆ.
ನಮ್ಮ ಮೆಟ್ರೋ ಸೇವಾ ಅವಧಿಯನ್ನು ವಿಸ್ತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರಿನ ರಾಜಾಜಿನಗರ ಬಿಜೆಪಿ ಶಾಸಕ, ಮಾಜಿ ಸಚಿವ ಸುರೇಶಕುಮಾರ ಪತ್ರ ಬರೆದಿದ್ದರು.
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 9ರ ವರೆಗೆ ಮಾತ್ರ ಮೆಟ್ರೋ ಸಂಚಾರವಿದೆ. ರಾತ್ರಿ 9 ಗಂಟೆಯ ಬಳಿಕ ಮೆಟ್ರೋ ಸಂಚಾರ ಇರುವುದಿಲ್ಲ. ಇದರಿಂದ ಹಲವು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ರಾತ್ರಿ 10 ಗಂಟೆಯವರೆಗೆ ಮೆಟ್ರೋ ಸೌಲಭ್ಯ ಕಲ್ಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸುರೇಶಕುಮಾರ ಅವರು ಪತ್ರ ಬರೆದಿದ್ದರು.
ನೈಟ್ ಕರ್ಫ್ಯೂ 11 ಗಂಟೆಯ ನಂತರ ವಿಧಿಸುವ ಬಗ್ಗೆ ಪರಿಶೀಲನೆ ನಡೆಸಬೇಕು. ಲಾಕ್ಡೌನ್ ಮುಂಚೆ ಮೆಟ್ರೋ ನಿಲ್ದಾಣಗಳಲ್ಲಿ ಎರಡು ಕಡೆ ದ್ವಾರಗಳು ಇದ್ದವು. ಈಗ ಒಂದು ಕಡೆ ಮಾತ್ರ ದ್ವಾರ ಇದ್ದು, ಸಮಸ್ಯೆಯಾಗುತ್ತಿದೆ. ಹೀಗಾಗಿ ಎರಡು ಕಡೆ ಪ್ರವೇಶ ದ್ವಾರ ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಿ ಎಂದು ಅವರು ಪತ್ರದಲ್ಲಿ ವಿನಂತಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ