ಚಿರತೆ ಪತ್ತೆ ಕಾರ್ಯ ಪ್ರಗತಿಯಲ್ಲಿ: ನೃಪತುಂಗ ಬೆಟ್ಟ- ಸುತ್ತಮುತ್ತಲ ಪ್ರದೇಶದಲ್ಲಿ ವಾಯುವಿಹಾರ, ಒಬ್ಬರೇ ತಿರುಗಾಡುವುದು ಬೇಡ- ಕ್ಷೀರಸಾಗರ

ಧಾರವಾಡ: ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ 3-4 ದಿನದಿಂದ ಚಿರತೆಯು ಕಾಣಿಸುತ್ತಿದ್ದು, ಕಾರಣ ಸಾರ್ವಜನಿಕರು ಬೆಳಿಗ್ಗೆ ಹಾಗೂ ಸಾಯಂಕಾಲ ವಾಯು ವಿಹಾರವನ್ನು ಹಾಗೂ ಒಂಟಿಯಾಗಿ ಸಂಚರಿಸುವುದು ಬೇಡ ಎಂದು ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅತಿ ಅವಶ್ಯವಿದ್ದಲ್ಲಿ ಮಾತ್ರ ಹೊರಗಡೆ, ಗುಂಪಾಗಿ ಸಂಚರಿಸಬೇಕು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆ ಹಿಡಿಯುವ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ರೀತಿ ಚಿರತೆ ಅಥವಾ ವನ್ಯಪ್ರಾಣಿಗಳು ಕಾಣಿಸಿಕೊಂಡಾಗ ನಮ್ಮ ವರ್ತನೆ ಹೆದರಿಕೆ ಅಥವಾ ಗಾಬರಿಯಿಂದ ಕೂಡಿರಬಾರದು. ಮತ್ತು ಚಿರತೆ ಇರುವ ಸುತ್ತಮುತ್ತಲಿನ ಸ್ಥಳದಲ್ಲಿ ಜನದಟ್ಟಣೆ ಸೇರಬಾರದು. ಚಿರತೆ ಇರುವ ಕುರಿತು ಅತಿಯಾದ ಪ್ರಚಾರದಿಂದ ಅಲ್ಲಿ ಜನದಟ್ಟಣೆ ಹೆಚ್ಚುತ್ತದೆ.ಆದ್ದರಿಂದ ಸಾರ್ವಜನಿಕರು ಸಹ ಬಹಳಷ್ಟು ಮುಂಜಾಗೃತೆ ವಹಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಚಿರತೆಯ ಛಾಯಾಚಿತ್ರಣ ಅಥವಾ ವಿಡಿಯೋ ತೆಗೆಯುವ ಸಾಹಸಕ್ಕೆ ಕೈ ಹಾಕುವುದು ಬೇಡ. ಇದರಿಂದ ಅನಾಹುತ ಸಂಭವಿಸಬಹುದು.
ಮತ್ತು ಅರಣ್ಯ ಇಲಾಖೆ ಮಾಧ್ಯಮದವರಿಗೆ ಮಾಹಿತಿ, ಛಾಯಾಚಿತ್ರ ಮತ್ತು ವಿಡಿಯೋಗಳನ್ನು ಕೊಡಲು ಕ್ರಮವಹಿಸುತ್ತಿದೆ ಎಂದು ಡಿಎಫ್‌ಒ ತಿಳಿಸಿದ್ದಾರೆ.
ಚಿರತೆ ಕಾರ್ಯಾಚರಣೆಗೆ ಈಗಾಗಲೇ ನುರಿತ ವನ್ಯಜೀವಿ ವೈದ್ಯರು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವನ್ಯಜೀವಿ ತಜ್ಞರೊಳಗೊಂಡ ತಂಡ ಕಾರ್ಯ ನಿರ್ವಹಿಸುತ್ತಿದೆ. ಮತ್ತು ಅಗತ್ಯವಿದ್ದಲ್ಲಿ ಅಗ್ನಿಶಾಮಕ ದಳ, ಆರೋಗ್ಯ ಇಲಾಖೆಯವರ ಸಹಕಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಚಿರತೆಗಳು ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಅವುಗಳ ಆವಾಸ ಸ್ಥಾನ ಕುಂಠಿತಗೊಳ್ಳುತ್ತಿರುವುದು ಮತ್ತು ಅವುಗಳ ನೈಸರ್ಗಿಕ ಆಹಾರವಾದ ಚಿಂಕೆ, ಕೊಂಡುಕುರಿ, ಮೊಲ, ಕಾಡುಕೋಳಿ, ಇನ್ನಿತರ ಪ್ರಾಣಿಗಳ ಅವ್ಯಾಹತವಾಗಿ ಬೇಟೆ ಆಡುತ್ತಿರುವುದೇ ಕಾರಣವಾಗಿದೆ. ಚಿರತೆ-ಮಾನವ ಸಂಘರ್ಷಕ್ಕೆ ಮುಖ್ಯವಾಗಿ ಅವುಗಳ ಆವಾಸ ಸ್ಥಾನದ ನಾಶ, ಇತರರಿಂದ ಅವುಗಳ ನೈಸರ್ಗಿಕ ಆಹಾರದ ಬೇಟೆ ಪ್ರಮುಖ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದ್ದರಿಂದ ರಾಜನಗರ, ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದ ನಿವಾಸಿಗಳು ಹಾಗೂ ಇಲ್ಲಿ ಸಂಚರಿಸುವ ಇತರ ಪ್ರದೇಶಗಳ ಜನರು ಒಬ್ಬಂಟಿಯಾಗಿ ಸಂಚರಿಸಬಾರದು. ಅತೀ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಸಾಧ್ಯವಿದ್ದಲ್ಲಿ ನೃಪತುಂಗ ಬೆಟ್ಟದ ಮಾರ್ಗ ಹೊರತು ಪಡಿಸಿ, ಬೇರೆ ಮಾರ್ಗವನ್ನು ಸಂಚಾರಕ್ಕೆ ಬಳಸಬೇಕು. ಚಿರತೆ ಪತ್ತೆ ಮಾಡಿ ಸೆರೆ ಹಿಡಿಯುವವರೆಗೆ ನೃಪತುಂಗ ಬೆಟ್ಟಕ್ಕೆ ಯಾರು ಬರದಿದ್ದರೆ ಕಾರ್ಯಾಚರಣೆಗೆ ಹೆಚ್ಚು ಅನುಕೂಲವಾಗುತ್ತದೆ. ಚಿರತೆಯು ಯಾವುದೇ ರೀತಿಯ ಗದ್ದಲ,ಜನದಟ್ಟಣೆ ಇರದೆ; ಆ ಪ್ರದೇಶವು ಶಾಂತವಾಗಿದ್ದರೆ ತನ್ನ ಸ್ಥಳ ಬಿಟ್ಟು ಹೊರ ಬಂದು ಸಂಚರಿಸುತ್ತದೆ. ಇದರಿಂದ ಚಿರತೆ ಸೆರೆ ಹಿಡಿಯಲು ಇನ್ನಷ್ಟು ಅನುಕೂಲವಾಗುತ್ತದೆ.
ಚಿರತೆ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಜಿಲ್ಲಾಡಳಿತ, ಮಹಾನಗರಪಾಲಿಕೆ ಹಾಗೂ ಅರಣ್ಯ ಇಲಾಖೆ ನೀಡುವ ಪ್ರಕಟಣೆಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಚಿರತೆ ಕಾರ್ಯಾಚರಣೆಗೆ ಸಹಕಾರ ನೀಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement