ಹುಬ್ಬಳ್ಳಿ : ಚಿರತೆ ವಿಡಿಯೊದಲ್ಲಿ ಸೆರೆ: ಬೋನಿಟ್ಟು ಹಿಡಿಯಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ

ಹುಬ್ಬಳ್ಳಿ: ಮೂರು ದಿನಗಳ ಹಿಂದೆ ಹುಬ್ಬಳ್ಳಿ ನೃಪತುಂಗ ಬೆಟ್ಟದ ಬಳಿ ಚಿರತೆ ಕಾಣಿಸಿಕೊಂಡಿದೆ ಎನ್ನುವುದಕ್ಕೆ ಪುಷ್ಟಿ ನೀಡುವಂತೆ ಶನಿವಾರ ರಾಜನಗರದ ಕೇಂದ್ರೀಯ ವಿದ್ಯಾಲಯದ ಬಳಿ ಚಿರತೆ ಕಾಣಿಸಿಕೊಂಡಿದೆ.
ಶನಿವಾರ ರಾತ್ರಿ 7.30ರ ಸುಮಾರಿಗೆ ರಾಜ ನಗರ ಕೇಂದ್ರಿಯ ವಿದ್ಯಾಲಯದ ಮೈದಾನದ ಸಮೀಪದಲ್ಲಿ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಹೀಗಾಗಿ ಚಿರತೆ ಸೆರೆಗೆ ಬೆಟ್ಟದ ಬಳಿ ಕಪ್ಪತಗುಡ್ಡದಿಂದ ತಂದಿರುವ ಎರಡು ಬೋನ್‌ಗಳನ್ನು ಇಡಲಾಗಿದೆ. ಒಂದು ಬೋನ್‌ನಲ್ಲಿ ನಾಯಿಯನ್ನು ಇಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿಯಲು ತಂತ್ರ ಹೆಣೆದಿದ್ದಾರೆ.

ಚಿರತೆ ಚಲನವಲನದ ಬಗ್ಗೆ ನಿಗಾ ಇರಿಸಲು ನೃಪತುಂಗ ಬೆಟ್ಟದ ಇಳಿಜಾರು ಜಾಗದಲ್ಲಿರುವ ಎರಡು ಮರಗಳಿಗೆ ಕ್ಯಾಮೆರಾ ಅಳವಡಿಸಲಾಗಿದೆ. ಮೂರು ದಿನಗಳಿಂದ ಬೆಟ್ಟದ ಮೇಲಿರುವ ವಾಚ್‌ ಟವರ್‌ನಿಂದ ಸಿಬ್ಬಂದಿ ನಿರಂತರವಾಗಿ ಬೈನಾಕ್ಯುಲರ್‌ ಮೂಲಕ ಚಿರತೆ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಡ್ರೋನ್‌ ಕ್ಯಾಮೆರಾ ಹಾರಿಸಿ ಶೋಧ ಕಾರ್ಯ ನಡೆಸಿದ್ದರು. ಶನಿವಾರ ರಾತ್ರಿ ಗಸ್ತಿನಲ್ಲಿದ್ದಾಗ ಸಿಬ್ಬಂದಿ ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಇಲಾಖೆ, ಬೆಟ್ಟದ ಸುತ್ತಮುತ್ತಲಿನ ಪ್ರದೇಶಕ್ಕೆ ರಾತ್ರಿ ವೇಳೆ ಒಬ್ಬಂಟಿಯಾಗಿ ಯಾರೂ ತೆರಳಬಾರದು ಎಂದು ಸೂಚನೆ ನೀಡಿದೆ.
ಬೆಟ್ಟಕ್ಕೆ ಹೋಗುವ ವಾಯು ವಿಹಾರಿಗಳಿಗೂ ಹೋಗದಂತೆ ತಿಳಿಸಲಾಗಿದೆ ಹಾಗೂ ಸಿಬ್ಬಂದಿ ನೇಮಿಸಲಾಗಿದೆ. ಅಲ್ಲದೆ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಒಬ್ಬಂಟಿಯಾಗಿ ಓಡಾಡಬಾರದು ಎಂದು ಮನವಿ ಮಾಡಲಾಗಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement