ಪಂಜಾಬ್‌ನ 16ನೇ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಚನ್ನಿ ಪ್ರಮಾಣ ವಚನ ಸ್ವೀಕಾರ

ಚಂಡೀಗಡ: ಪಂಜಾಬಿನ 16ನೇ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಚನ್ನಿ ಇಂದು (ಸೋಮವಾರ) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹಿಂದಿನ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದ 58 ವರ್ಷದ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ನಿನ್ನೆ ಆಯ್ಕೆ ಮಾಡಲಾಗಿತ್ತು. ಇಂದು ರಾಜ್ಯಪಾಲರಾದ ಬನ್ವಾರಿಲಾಲ್‌ ಪುರೋಹಿತ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದರು.
ಇದೇ ಮೊದಲ ಬಾರಿಗೆ ಪಂಜಾಬ್‌ನ ಚುಕ್ಕಾಣಿ ದಲಿತ ಸಮುದಾಯದ ನಾಯಕರಿಗೆ ಸಿಕ್ಕಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಚಮಕೌರ್‌ ಸಾಹಿಬ್‌ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಚನ್ನಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2015-16ರಲ್ಲಿ ಚನ್ನಿ ಅವರು ಪಂಜಾಬ್‌ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ಮಾರ್ಚ್‌ 2017ರಲ್ಲಿ ಸಿಎಂ ಅಮರಿಂದರ್‌ ಸಿಂಗ್‌ ಸಂಪುಟಕ್ಕೆ ಸೇರುವ ಮೂಲಕ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿದ್ದರು.
ಕಾಂಗ್ರೆಸ್‌ನ 50ಕ್ಕೂ ಹೆಚ್ಚು ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಶನಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಚನ್ನಿ ಅವರ ಹೆಸರನ್ನು ಭಾನುವಾರ ಘೋಷಣೆ ಮಾಡಲಾಗಿತ್ತು.

ಪ್ರಮುಖ ಸುದ್ದಿ :-   50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement