ಟೂಲ್‌ಕಿಟ್‌: ರಮಣ್ ಸಿಂಗ್‌, ಸಂಬಿತ್ ಪಾತ್ರ ವಿರುದ್ಧದ ತನಿಖೆ ತಡೆ ಪ್ರಶ್ನಿಸಿದ್ದ ಮೇಲ್ಮನವಿ ವಜಾ ಮಾಡಿದ ಸುಪ್ರೀಂಕೋರ್ಟ್‌

ನವದೆಹಲಿ: ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ವಿರುದ್ಧದ ತನಿಖೆಗೆ ತಡೆ ನೀಡಿದ್ದ ರಾಜ್ಯ ಹೈಕೋರ್ಟ್ ಆದೇಶ ಪ್ರಶ್ನಿಸಿ ಛತ್ತೀಸ್‌ಗಢ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು (ಬುಧವಾರ) ವಜಾಗೊಳಿಸಿದೆ.
ನಾವು ಮಧ್ಯಪ್ರವೇಶಿಸಲು ಇಚ್ಛಿಸುವುದಿಲ್ಲ. ಹೈಕೋರ್ಟ್ ಈ ವಿಷಯವನ್ನು ತ್ವರಿತವಾಗಿ ತೀರ್ಮಾನಿಸಲಿ. ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ಈ ಅವಲೋಕನಗಳು ಅರ್ಹತೆಯ ಆಧಾರದಲ್ಲಿ ಪ್ರಕರಣ ನಿರ್ಧರಿಸಲು ತೊಡಕಾಗದಿರಲಿ” ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ತಿಳಿಸಿತು ಎಂದು ಬಾರ್‌ ಎಂಡ್‌ ಬೆಂಚ್‌ ವರದಿ ಹೇಳಿದೆ.
ಸಿಂಗ್ ಮತ್ತು ಪಾತ್ರಾ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಮಾಡಿರುವ ಆರೋಪಗಳಲ್ಲಿ ಯಾವುದೇ ರೀತಿಯ ಸಾರ್ವಜನಿಕ ಶಾಂತಿ ಕದಡುವ ಅಥವಾ ನೆಮ್ಮದಿ ಭಂಗ ಮಾಡುವ ಪರಿಣಾಮಗಳು ಕಂಡುಬರುವುದಿಲ್ಲ. ಇದು ಎರಡು ರಾಜಕೀಯ ಪಕ್ಷಗಳ ನಡುವಿನ ರಾಜಕೀಯ ಪೈಪೋಟಿಯನ್ನು ಬಿಂಬಿಸುತ್ತದೆ ಎಂದು ತಿಳಿಸಿ ಜೂನ್ 11 ರಂದು ಛತ್ತೀಸ್‌ಗಢ ಹೈಕೋರ್ಟ್ ಮಧ್ಯಂತರ ಪರಿಹಾರದ ಎರಡು ಪ್ರತ್ಯೇಕ ಆದೇಶಗಳನ್ನು ನೀಡಿತ್ತು. ದುರುದ್ದೇಶ ಮತ್ತು ರಾಜಕೀಯ ದ್ವೇಷದಿಂದ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ತಿಳಿಸಿದ್ದರು. ಆದ್ದರಿಂದ, ಮೇ 19ರಂದು ಸಿಂಗ್ ವಿರುದ್ಧ ದಾಖಲಾದ ಎಫ್ಐಆರ್ ಆಧರಿಸಿ ತನಿಖೆ ಮುಂದುವರೆಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಎಂದು ಎಫ್ಐಆರ್‌ಗೆ ತಡೆ ನೀಡುವಾಗ ನ್ಯಾಯಾಲಯ ತೀರ್ಪು ನೀಡಿತ್ತು.
ರಮಣ್ ಸಿಂಗ್ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ ಆದೇಶವನ್ನು ಪ್ರಶ್ನಿಸಿ ಜೂನ್ 11ರಂದು ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರ ಹೈಕೋರ್ಟ್‌ ತನಿಖೆಗೆ ತಡೆ ನೀಡುವ ಮೂಲಕ ತಪ್ಪಾಗಿ ರಮಣ್‌ ಸಿಂಗ್‌ ಅವರಿಗೆ ಮಧ್ಯಂತರ ಪರಿಹಾರ ಒದಗಿಸಿದೆ ಎಂದು ಹೇಳಿತ್ತು. ಸಂವಿಧಾನದ 226 ನೇ ಪರಿಚ್ಛೇದದ ಅಡಿಯಲ್ಲಿ ಹೈಕೋರ್ಟ್‌ ತನ್ನ ಅಸಾಧಾರಣ ಅಧಿಕಾರಗಳನ್ನು ಮಿತವಾಗಿ ಮತ್ತು ಅಪರೂಪದ ಪ್ರಕರಣಗಳಲ್ಲಿ ಬಳಸಬೇಕು ಎಂದು ಸುಪ್ರೀಂಕೋರ್ಟ್ ಪದೇ ಪದೇ ಹೇಳುತ್ತದೆ ಎಂಬ ಕಾರಣದಿಂದ ಆದೇಶಗಳನ್ನು ಬದಿಗಿರಿಸಲು ಅದು ಕೋರಿತ್ತು.
ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಜ್ಯ ಘಟಕದ ಅಧ್ಯಕ್ಷರಾಗಿರುವ ಆಕಾಶ್‌ ಶರ್ಮ ಅವರು ನೀಡಿದ್ದ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿತ್ತು. ನರೇಂದ್ರ ಮೋದಿ ಅವರ ವರ್ಚಸ್ಸು ಕೆಡಿಸಲು ಕಾಂಗ್ರೆಸ್‌ ಟೂಲ್‌ ಕಿಟ್‌ ತಯಾರಿಸಿದೆ ಎಂದು ರಮಣ ಸಿಂಗ್‌ ಟ್ವೀಟ್‌ ಮಾಡಿದ್ದರು. ಆದರೆ ಈ ಆರೋಪ ನಿರಾಕರಿಸಿದ ಕಾಂಗ್ರೆಸ್‌, ಪಕ್ಷದ ಪ್ರತಿಷ್ಠೆ ಹಾಳು ಮಾಡಲು ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿತ್ತು.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement