ಭಾರತೀಯ ಜೈನ್ ಸಂಘಟನೆಯಿಂದ ಕೋವಿಡ್ ಮುಕ್ತ ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ

ಯಾದಗಿರಿ: ಕೊರೊನಾ ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಭಾರತೀಯ ಜೈನ್ ಸಂಘಟನೆಯು ಜಿಲ್ಲಾಡಳಿತ ಜೊತೆ ಕೈ ಜೋಡಿಸಿ ಕೊರೊನಾ ಮುಕ್ತ ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಕೊರೊನಾ ವಿರುದ್ಧ ಹೋರಾಡಲು ಇನ್ನಷ್ಟು ಆತ್ಮವಿಶ್ವಾಸ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅಭಿಪ್ರಾಯಪಟ್ಟರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾರತೀಯ ಜೈನ್ ಸಂಘಟನೆಯ ವತಿಯಿಂದ ನಡೆದ ಕೋವಿಡ್ ಫ್ರೀ ವಿಲೇಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಾದಗಿರಿ ಜಿಲ್ಲೆಗೆ ಸೇವೆ ಮಾಡಲು ಬಂದಿದ್ದು ನನ್ನ ಅದೃಷ್ಟ, ಜಿಲ್ಲೆಯ ಅಧಿಕಾರಿ ತಂಡವು ತುಂಬಾ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆಯವರು , ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಪ್ರತಿಯೊಬ್ಬ ಅಧಿಕಾರಿಗಳು ಮನೆಮನೆಗೆ ತೆರಳಿ ಕೈಮುಗಿದು ಲಸಿಕಾಕರಣಕ್ಕೆ ಜನರನ್ನು ಮನವೊಲಿಸುತ್ತಿದ್ದಾರೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಕೊರೊನಾ 2 ನೇ ಅಲೆಯ ತೀವ್ರತೆಯೂ ಮೇ ತಿಂಗಳಲ್ಲಿ ಜಾಸ್ತಿ ಇತ್ತು. ಆ ಸಂದರ್ಭದಲ್ಲಿ ಆಮ್ಲಜನಕದ ಅಭಾವವಿತ್ತು. ಇಂತಹ ಪರಿಸ್ಥಿತಿಯಲ್ಲಿ ಚಿಕ್ಕದಾದ ನಮ್ಮ ಜಿಲ್ಲೆಯಲ್ಲಿ 800 ರಿಂದ 900 ಕೊರೊನಾ ಕೇಸ್ ಗಳು ದಾಖಲಾಗುತ್ತಿದ್ದವು. ನಮ್ಮ ಜಿಲ್ಲೆಯಲ್ಲಿ ಒಟ್ಟು 8 ಲಕ್ಷದ 50 ಸಾವಿರ ಅರ್ಹ ಫಲಾನುಭವಿಗಳಿದ್ದಾರೆ. ಇದರಲ್ಲಿ ಸುಮಾರು 6 ಲಕ್ಷ ಜನರಿಗೆ ಮೊದಲನೆ ಡೋಸ್ ಲಸಿಕೆ ನೀಡಿ 60 ಶೇಕಡಾವಾರು ಗುರಿ ತಲುಪಿದ್ದೇವೆ. ಇನ್ನುಳಿದವರು ತಪ್ಪು ಕಲ್ಪನೆಗಳಿಂದ ಲಸಿಕಾಕರಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಮ್ಮಲ್ಲಿ ಪ್ರತಿ ಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನ ಸಿಬ್ಬಂದಿಗಳೊಂದಿಗೆ ಜೈನ್ ಸಂಘಟನೆಯ ಸ್ವಯಂ ಸೇವಕರು ಕೈ ಜೋಡಿಸಿ ಜನರನ್ನು ಲಸಿಕಾಕರಣಕ್ಕೆ ಮನವೊಲಿಸಿದರೆ ಅದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ ವೇದಮೂರ್ತಿ, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜೈನ್ ಸಂಘಟನೆಯ ಸಂಸ್ಥಾಪಕ ಶಾಂತಿಲಾಲ್ ಮುಥ್ಥಾ, ಬಿ.ಜೆ.ಎಸ್ ನ್ಯಾಷನಲ್ ಪ್ರೆಸಿಡೆಂಟ್ ರಾಜೇಂದ್ರ ಲುಂಕದ್, ಬಿ.ಜೆ.ಎಸ್ ಸಿಇಓ ವಿಶಾಲ್ ಫನಾಸೆ, ಬಿ.ಜೆ.ಎಸ್ ಸ್ಟೇಟ್ ಪ್ರೆಸಿಡೆಂಟ್ ಮಹಾವೀರ ಪರಿಖಾ, ಸ್ಟೇಟ್ ಸೆಕ್ರೆಟರಿ ವಿಜಯ್ ರನವಾಲ್, ಬಿ.ಜೆ.ಎಸ್ ಯಾದಗಿರಿ ಜಿಲ್ಲಾ ಸಂಚಾಲಕ ರಾಜೇಶ ಜೈನ್, ಯಾದಗಿರಿ ಜಿಲ್ಲಾಧ್ಯಕ್ಷ ಅಜಿತ್ ಜೈನ್, ಯಾದಗಿರಿ ಜಿಲ್ಲಾ ಸೆಕ್ರೆಟರಿ ದಿನೇಶ ಜೈನ್, ಯಾದಗಿರಿ ತಹಶೀಲ್ದಾರ ಚೆನ್ನಮಲ್ಲಪ್ಪ ಘಂಟಿ ಇನ್ನಿತರರು ಉಪಸ್ಥಿತರಿದ್ದರು

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement