ಬೆಂಗಳೂರು: ರಾಜ್ಯದಲ್ಲಿ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳ ಸಿಬ್ಬಂದಿ ಮತ್ತು ಅರ್ಚಕರಿಗೆ ಆರೋಗ್ಯ ವಿಮೆ ಒದಗಿಸುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಮುಜರಾಯಿ ಇಲಾಖೆ ಅಧೀನದಲ್ಲಿ ರಾಜ್ಯದಾದ್ಯಂತ 34,000ಕ್ಕೂ ಅಧಿಕ ದೇವಸ್ಥಾನಗಳಿವೆ. ಇದರಲ್ಲಿ ಹೆಚ್ಚಿನ ಆದಾಯ ಬರುವ ದೇವಸ್ಥಾನಗಳನ್ನು “ಎ” ಗ್ರೇಡ್ ಎಂದು, ಕಡಿಮೆ ಆದಾಯ ಗಳಿಸುವ ದೇವಸ್ಥಾನಗಳನ್ನು “ಬಿ” ಗ್ರೇಡ್ ಎಂದು ಹಾಗೂ ಯಾವುದೇ ಆದಾಯ ಇಲ್ಲದ ದೇವಸ್ಥಾನಗಳನ್ನು “ಸಿ” ಗ್ರೇಡ್ನಲ್ಲಿ ವಿಂಗಡಿಸಲಾಗಿದೆ. ಈ ಎಲ್ಲಾ ಬಗೆಯ ದೇವಸ್ಥಾನಗಳು ಸೇರಿ ಸುಮಾರು 40,000 ಸಿಬ್ಬಂದಿ ಇದ್ದಾರೆ.
ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ದೇವಸ್ಥಾನಗಳ ಆದಾಯ ಹೆಚ್ಚಳ, ಭಕ್ತರಿಗೆ ಒದಗಿಸುತ್ತಿರುವ ಸೌಲಭ್ಯಗಳು ಮತ್ತು ದೇವಸ್ಥಾನಗಳ ಜೀಣೋದ್ಧಾರದ ಇತ್ಯಾದಿ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, “ಕೋವಿಡ್ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಬಹುತೇಕ ಬಾಗಿಲು ಮುಚ್ಚಿದ್ದವು. ಈಗ ಎಲ್ಲ ದೇವಸ್ಥಾನಗಳೂ ತೆಗೆದಿದ್ದು, ಭಕ್ತರ ಭೇಟಿಗೆ ಅವಕಾಶ ನೀಡಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವಂತಹ ಸಿಬ್ಬಂದಿ ಮತ್ತು ಅರ್ಚಕರಿಗೆ ಆರೋಗ್ಯ ವಿಮೆ ಒದಗಿಸುವ ಸಂಬಂಧ ಚರ್ಚಿಸಲಾಗಿದೆ. ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೇವಸ್ಥಾನ ಸಿಬ್ಬಂದಿ ಮತ್ತು ಅರ್ಚಕರಿಗೆ 6ನೇ ವೇತನ ಆಯೋಗ ಜಾರಿ ಮಾಡುವಂತೆ ಅನೇಕ ಶಾಸಕರಿಂದ ಒತ್ತಡ ಬರುತ್ತಿದೆ. ಇಲಾಖೆ ವ್ಯಾಪ್ತಿಯಲ್ಲಿ 5ನೇ ವೇತನ ಆಯೋಗ ಜಾರಿ ಮಾಡಲಾಗಿದ್ದು, ಅದರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. 6ನೇ ವೇತನ ಆಯೋಗ ಜಾರಿಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ